ಗ್ರಾಮೀಣ ಜನರು ಸ್ವಾಸ್ಥೃ ಜೀವನ ಸಾಗಿಸಿ

puttabuddi
Published on

ಮೈಸೂರು: ಗ್ರಾಮೀಣ ಭಾಗದ ಜನರು ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಸ್ವಾಸ್ಥೃ ಜೀವನ ಸಾಗಿಸಬೇಕು ಎಂದು ಸಮಾಜ ಸೇವಕರೂ ಆದ ಯುವ ಮುಖಂಡ ಶರತ್ ಪುಟ್ಟಬುದ್ಧಿ ಸಲಹೆ ನೀಡಿದರು.
ಕೆ.ಎನ್.ಪುಟ್ಟಬುದ್ಧಿ ಫೌಂಡೇಷನ್, ಜಿಲ್ಲಾ ಸಂಚಾರ ನೇತ್ರ ಚಿಕಿತ್ಸಾ ಘಟಕ, ಕೆ.ಆರ್.ಆಸ್ಪತ್ರೆ ಹಾಗೂ ಆರೋಗ್ಯ ಭಾರತಿ ಸಂಸ್ಥೆ ವತಿಯಿಂದ ಭಾನುವಾರ ತಾಲೂಕಿನ ಕೀಳನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಗ್ರಾಮೀಣ ಪ್ರದೇಶದ ಜನರು ತಮ್ಮ ನಿತ್ಯದ ಕೃಷಿ, ಬೇಸಾಯದ ಚಟುವಟಿಕೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆರ್ಥಿಕವಾಗಿ ಅಶಕ್ತರಾದ ಬಡ ಜನರು ಉತ್ತಮ ವೈದ್ಯಕೀಯ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ.ಗಳನ್ನು ಆಸ್ಪತ್ರೆಗಳಿಗೆ ವಿನಿಯೋಗ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜನರು ತಮ್ಮ ಬಗ್ಗೆ ಕಾಳಜಿ ವಹಿಸಬೇಕು. ಆ ಮೂಲಕ ಆರೋಗ್ಯ ಪೂರ್ಣ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಆರೋಗ್ಯವೇ ನಿಜವಾದ ಭಾಗ್ಯ ಎನ್ನುವುದನ್ನು ನಾವು ಮರೆಯಬಾರದು. ಇಂದಿನ ಒತ್ತಡದ ಜೀವನ ಹಾಗೂ ಬದಲಾದ ಕಾಲಮಾನದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪ್ರಸ್ತುತ ನಮ್ಮೆಲ್ಲರ ಜೀವನ ಪದ್ಧತಿ ಬದಲಾಗಿದೆ. ಅದರಲ್ಲಿಯೂ ಸೇವಿಸುವ ಆಹಾರ ಸತ್ವಯುತವಾಗಿಲ್ಲ. ಇದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ಜೀವಸತ್ವ, ಪ್ರೋಟಿನ್‌ಗಳು ಸಿಗುತ್ತಿಲ್ಲ. ಜನರು ಸಾಧ್ಯವಾದಷ್ಟು ಉತ್ತಮ ಆಹಾರ ಸೇವನೆಗೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಜನರು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕೆ.ಎನ್.ಪುಟ್ಟಬುದ್ಧಿ ಫೌಂಡೇಷನ್ ವತಿಯಿಂದ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವರುಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಫೌಂಡೇಷನ್ ಅಧ್ಯಕ್ಷ ಕೆ.ಎನ್.ಪುಟ್ಟಬುದ್ಧಿ ಮಾತನಾಡಿ, ಯಾಂತ್ರಿಕ ಯುಗದಲ್ಲಿ ಜನರು ಪೌಷ್ಟಿಕ ಆಹಾರ ಸೇವಿಸಲು ಮರೆಯುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಮಹಿಳೆಯರು ಅನಾರೋಗ್ಯದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಾರಣ ಆರೋಗ್ಯದ ಅರಿವಿನ ಕೊರತೆ ಮತ್ತು ನಿರ್ಲಕ್ಷೃವಾಗಿದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷೃ ತೋರಿದರೆ ಮುಂದಿನ ದಿನಗಳಲ್ಲಿ ನಾವೇ ತೊಂದರೆಗೆ ಸಿಲುಕಬೇಕಾಗುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ 400ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. 150ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆಗೆ ಒಳಪಟ್ಟರು. 13ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. 150 ಜನರಿಗೆ ಸ್ಥಳದಲ್ಲೇ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಕೊಡಲಾಯಿತು.

ಕೀಳನಪುರ ಗ್ರಾಪಂ ಸದಸ್ಯ ಡಿ.ಮಹೇಶ್, ಮಾಜಿ ಅಧ್ಯಕ್ಷ ಕೆ.ಪಿ.ಚನ್ನಬಸಪ್ಪ, ಆರೋಗ್ಯ ಭಾರತಿ ಸಂಸ್ಥೆಯ ಕೃಷ್ಣ , ಸೇವಾಭಾರತಿ ಅಧ್ಯಕ್ಷ ಡಿ.ಎಸ್.ತಿವಾರಿ, ಆಯುರ್ವೇದ ಮೆಡಿಕಲ್ ಕಾಲೇಜಿನ ವೈದ್ಯೆ ಡಾ.ಯೋಗಿತಾ, ಜೆಎಸ್‌ಎಸ್ ಆಸ್ಪತ್ರೆಯ ವೈದ್ಯೆ ಡಾ.ಸೃಷ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net