

ಮೈಸೂರು: ಇಂಗ್ಲಿಷ್ ಭಾಷೆ ಬಾರದ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿರುವ ಅನೇಕ ಅಸಾಧಾರಣ ಪ್ರತಿಭಾವಂತರು ಅವಕಾಶ ವಂಚಿತರಾಗಿ ತೆರೆಮೆರೆಗೆ ಸರಿಯುತ್ತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ನಿಂಗಮ್ಮ ಸಿ. ಬೆಟ್ಸೂರ್ ಆತಂಕ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರ ವಿಭಾಗ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅನುವಾದ ಸಂಪದದಡಿ ಉನ್ನತ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆ ಉತ್ತೇಜಿಸಲು ಸುಸ್ಥಿರ ಪರಿಸರ ವ್ಯವಸ್ತೆ ನಿರ್ಮಾಣ, ಸವಾಲು ಹಾಗೂ ಅವಕಾಶ ವಿಷಯ ಕುರಿತ ವಿಚಾರಸಂಕಿರಣ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಅಸಾಧಾರಣ ಪ್ರತಿಭಾವಂತರಿದ್ದಾರೆ. ಆದರೆ ಅವರಲ್ಲಿ ಬಹುತೇಕರಿಗೆ ಇಂಗ್ಲಿಷ್ ಭಾಷೆ ಬಾರದ ಒಂದೇ ಕಾರಣಕ್ಕೆ ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕೌಶಲವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನು ಇಂಗ್ಲಿಷ್ ಸೇರಿದಂತೆ ಇನ್ನಿತರ ಭಾಷೆಗಳಿಂದ ಕನ್ನಡಕ್ಕೆ ತರ್ಜುಮೆ ಮಾಡಿದರೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರ ಜತೆಗೆ ಕನ್ನಡ ಭಾಷೆಯೂ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ನಮ್ಮ ಪ್ರಾದೇಶಿಕ ಭಾಷೆಗಳನ್ನು ಮರೆತು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದೇವೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ. ಮಾತೃಭಾಷೆಯಲ್ಲಿ ಕಲಿತರೆ ನಮ್ಮ ಸಾಂಸ್ಕೃತಿಕ ಪರಂಪರೆ ಬೆಳೆಯುತ್ತದೆ ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಕನ್ನಡ ಭಾಷೆಯ ಬೆಳವಣಿಗೆಗೆ ಬೇಕಾಗುವ ಸುಸ್ಥಿರ ಪರಿಸರವನ್ನು ನಿರ್ಮಿಸಬೇಕು. ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯ ನಡೆಯಬೇಕು ಎಂದು ಸಲಹೆ ನೀಡಿದರು.
ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್, ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಶಾಸ್ತ್ರ ವಿಭಾಗದ ಅಧ್ಯಕ್ಷೆ ಪ್ರೊ.ಜಿ.ಶೀಲಾ ಇತರರು ಇದ್ದರು.