

ದೇವದುರ್ಗ: ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಆರೋಪಿಸಿ ಪಟ್ಟಣದ ತಾಪಂ ಕಚೇರಿ ಎದುರು ನಮ್ಮ ಕರ್ನಾಟಕ ಸೇನೆಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನರೇಗಾ ಯೋಜನೆ ಸರಿಯಾಗಿ ಜಾರಿಗೊಳಿಸದ ಕಾರಣ ರೈತರು, ಕೂಲಿಕಾರರು ಗುಳೆ ಹೋಗುತ್ತಿದ್ದಾರೆ. ಕುಡಿವ ನೀರು, ಸಮರ್ಪಕ ರಸ್ತೆ, ನಿರಂತರ ವಿದ್ಯುತ್ ಇಲ್ಲದೆ ಜನರು ತತ್ತರಿಸಿದ್ದಾರೆ. ಕೆಲ ಗ್ರಾಮಗಳಲ್ಲಿ ಸ್ಮಶಾನಭೂಮಿ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಹಳ್ಳಿಗಳಿಗೆ ಬಸ್ ಸೌಲಭ್ಯವಿಲ್ಲ. ಮದ್ಯ ಅಕ್ರಮ ಮಾರಾಟ, ಮಟ್ಕಾ, ಜೂಜಾಟ ಜೋರಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಎಲ್ಲ ಹಳ್ಳಿಗಳಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಬೇಕು. ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟ ತಡೆಯಬೇಕು. ಪ್ರತಿಹಳ್ಳಿಯಲ್ಲಿ ಆರೋಗ್ಯ ಶಿಬಿರ ಆಯೋಜಿಸಿ ಚಿಕಿತ್ಸೆ ನೀಡಬೇಕು. ಮರಳು ಅಕ್ರಮ ಸಾಗಣೆ, ಮಟ್ಕಾ, ಇಸ್ಪೀಟ್ ಜೂಜಾಟ ನಡೆಯದಂತೆ ನಿಗಾ ವಹಿಸಬೇಕು ಎಂದು ಆಗ್ರಹಿಸಲಾಯಿತು.
ಗ್ರಾಮೀಣ ಭಾಗದ ರಸ್ತೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಬೇಕು. ನರೇಗಾ ಯೋಜನೆ ಸಮರ್ಪಕ ಜಾರಿಗೊಳಿಸಬೇಕು. ಹಳ್ಳಿಗಳಲ್ಲಿ ಸೊಳ್ಳೆ ನಿಯಂತ್ರಿಸಬೇಕು. ಚರಂಡಿ ಹೂಳು ತೆಗೆದು ಕಸ ವಿಲೇವಾರಿ ಮಾಡಬೇಕು. ಶಾಲೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ಜತೆ ಶಿಕ್ಷಕರನ್ನು ಒದಗಿಸಬೇಕು. ಕೆರೆಗಳ ಅಭಿವೃದ್ಧಿ ಜತೆಗೆ ಎನ್‌ಆರ್‌ಬಿ ನಾಲೆ ಅಭಿವೃದ್ಧಿ ಮಾಡಿ ರೈತರ ಜಮೀನಿಗೆ ನೀರು ಒದಗಿಸಬೇಕೆಂದು ಒತ್ತಾಯಿಸಲಾಯಿತು.