ಅರಿವು ಕೇಂದ್ರಗಳಿಂದ ಮಹಿಳಾ ಸಬಲೀಕರಣ

ola
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಸಬಲೀಕರಣ ವಿಷಯವಾಗಿ ಪಂಚಾಯಿತಿ ವ್ಯಾಪ್ತಿಯ ಅರಿವು ಕೇಂದ್ರಗಳು ಮಹತ್ವದ ಹೆಜ್ಜೆ ಇರಿಸಿದ್ದು, ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಪರಿಹಾರ ಕಲ್ಪಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿವೆ.

ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಮಹಿಳೆಯರಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವ ಗ್ರಾಮಾಂತರ ಜಿಲ್ಲೆಯಲ್ಲಿ ಅರಿವು ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಹೆಣ್ಣು ಮಕ್ಕಳಲ್ಲಿ ಮುಖ್ಯವಾಗಿ ಕ್ರೀಡಾಮನೋಭಾವನೆ ಹೆಚ್ಚಿಸುವುದು, ಕ್ರೀಡಾಸಕ್ತಿ ಬೆಳೆಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದು ಸಾಕಷ್ಟು ಮುಂಚೂಣಿಗೆ ಬರುತ್ತಿದೆ.

ಜಾಗೃತಿ ಮೂಡಿಸುವ ಕಾರ್ಯ: ಗ್ರಾಮೀಣ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಪೌಷ್ಟಿಕತೆ, ರಕ್ತಹೀನತೆ, ವಿಟಮಿನ್ ಕೊರತೆ ನೀಗಿಸುವುದು ಹಾಗೂ ಇದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು. ಹೆಣ್ಣು ಮಕ್ಕಳ ಮೇಲಿನ ದೌಜನ್ಯ ತಗ್ಗಿಸಲು ಕಾನೂನು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಬಾಲ್ಯ ವಿವಾಹದಂಥ ಅನಿಷ್ಟ ಪದ್ಧತಿ ಬಗ್ಗೆ ಜಾಗೃತಿ ಮೂಡಿಸುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಮದುವೆ ವಯಸ್ಸು ಮುಂದೂಡುವುದು ಸೇರಿ ಇವೆಲ್ಲದರ ಬಗ್ಗೆ ಗ್ರಾಮ ಪಂಚಾಯಿತಿ ಒಕ್ಕೂಟಗಳು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

ಗ್ರಾಮೀಣ ಒಲಂಫಿಕ್ಸ್ ಆಯೋಜನೆ: ಎಲ್ಲ ಕ್ರೀಡೆಗಳಲ್ಲಿ ಪುರುಷರಷ್ಟೇ ಸಮಾನವಾಗಿ ಮಹಿಳೆಯೂ ಪಾಲ್ಗೊಳ್ಳಬೇಕು ಎಂದು ಉದ್ದೇಶದಿಂದ ಗ್ರಾಮೀಣ ಒಲಂಫಿಕ್ಸ್ ಯೋಜನೆ ರೂಪಿಸಲಾಗಿದೆ, ಬಾಲಕಿಯರು, ಮಹಿಳೆಯರು, ಸ್ವಸಹಾಯ ಸಂಘಗಳ ಸದಸ್ಯರು, ಒಕ್ಕೂಟದ ಮಹಿಳೆಯರು, ಗ್ರಾಮದ ಪುನರ್‌ವಸತಿ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತ ಸಿಬ್ಬಂದಿ, ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಸಿಬ್ಬಂದಿ ಭಾಗವಹಿಸಲಿದ್ದಾರೆ. ಈ ಕ್ರೀಡೆಗಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ತನ್ನ ಸ್ವಂತ ಸಂಪನ್ಮೂಲದಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ದೇಣಿಗೆ ಪಡೆದು ಒಲಂಪಿಕ್ಸ್ ಆಯೋಜನೆ ಮಾಡಲಿದೆ.ಕಬ್ಬಡಿ, ಖೋಖೋ, ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಓಟ, ರೀಲೆ, ಹಗ್ಗ ಜಗ್ಗಾಟ, ಧ್ರೋಬಾಲ್ ಚಿತ್ರಕಲೆ, ರಂಗೋಲಿ, ಪ್ರಬಂಧ, ಕಥೆ ಹೇಳುವುದು, ಭಾಷಣ, ಕವನ ವಚನ ಮತ್ತಿತರ ಕ್ರೀಡಾಚಟುವಟಿಕೆ ನಡೆಯಲಿವೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಗೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ವರ್ಗಾವಣೆಯಾದ ಮೇಲೆ ಓದುವ ಬೆಳಕು ಕಾರ್ಯಕ್ರಮದಡಿ ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಹೆಚ್ಚಿಸುವ ಕಾರ್ಯಕ್ರಮಗಳ ಜತೆಗೆ ಮಹಿಳೆಯರ ಹಕ್ಕು ಮತ್ತು ಸಬಲೀಕರಣವನ್ನು ಉತ್ತೇಜಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಸಂಬಂಧ ಅರಿವು ಕೇಂದ್ರಗಳು ವಿವಿಧ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿ ಪರಿವರ್ತನೆಯಾಗುತ್ತಿದೆ. ಗ್ರಂಥಾಲಯಗಳಲ್ಲಿ ಪುಸ್ತಕ, ಪತ್ರಿಕೆ ಓದುವುದಕ್ಕಷ್ಟೇ ಸೀಮಿತವಾಗದೆ ಇನ್ನಿತರ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದೆ, ಅರಿವು ಕೇಂದ್ರಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಜನರಲ್ಲಿ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ. ಮಹಿಳೆಯರಿಗೆ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುವುದು. ಆತ್ಮಸ್ಥೈರ್ಯ ತುಂಬುವುದು ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net