ಬರಿದಾಗುತ್ತಿದೆ ಕೆರೆಗಳ ಒಡಲು

rural lakes dry
Published on

ಕೈ ಕೊಟ್ಟ ಮಳೆರಾಯ

ಅಂತರ್ಜಲ ಮಟ್ಟ ಕುಸಿತ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ವರ್ಷದ ಹಿಂದೆ ಕೋಡಿ ಹರಿದಿದ್ದ ಕೆರೆಗಳು ಬರಿದಾಗುತ್ತಿವೆ. ಸೆಪ್ಟೆಂಬರ್ ಆರಂಭವಾದರೂ ಮಳೆ ಇಲ್ಲದೆ ಜಿಪಂ ವ್ಯಾಪ್ತಿಯ 500ಕ್ಕೂ ಹೆಚ್ಚು ಕೆರೆಗಳಲ್ಲದೆ, ಮೀನುಗಾರಿಕೆ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಲವು ಕೆರೆಗಳು ಬತ್ತಿದ್ದು, ಅಂತರ್ಜಲಮಟ್ಟ ಕುಸಿಯುತ್ತಿರುವ ಜತೆಗೆ ಮೀನುಗಾರಿಕೆ, ಬೇಸಾಯ, ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.
ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ಕೊರತೆಯಾಗಿದೆ. ಕಳೆದ ವರ್ಷ ಜುಲೈನಲ್ಲಿ ಕೆರೆಗಳು ಕೋಡಿ ಹರಿದಿದ್ದವು. ಈ ಬಾರಿ ಕೆರೆಗಳು ಅರ್ಧದಷ್ಟ್ಟೂ ತುಂಬಿಲ್ಲ. ಜಿಲ್ಲೆಯಲ್ಲಿ ಈ ಬಾರಿ ಶೇ.62 ಮಳೆ ಕೊರತೆಯಾಗಿದೆ. ಇದರಿಂದ ಬಹುತೇಕ ಕೆರೆಗಳಲಿ ್ಲಶೇ.30 ಮಾತ್ರ ನೀರಿದೆ. ಆಗಸ್ಟ್‌ನಲ್ಲಿ ವಾಡಿಕೆ ಮಳೆ ಪ್ರಮಾಣವೂ ತಗ್ಗಿದ್ದು ಪರಿಸ್ಥಿತಿ ಹೀಗೆ ಮುಂದುವರಿದರೆ ಕೆಲವೇ ದಿನಗಳಲ್ಲಿ ಕೆರೆಗಳಲ್ಲಿ ನೀರು ಸಂಪೂರ್ಣ ಇಂಗಿ ಹೋಗಲಿದೆ.

664 ಕೆರೆಗಳು: ಜಿಪಂ, ಸಣ್ಣ ನೀರಾವರಿ ಇಲಾಖೆಯ 664 ಕೆರೆಗಳಿವೆ. ಬಹುತೇಕ ಕೆರೆಗಳಲ್ಲಿ ಶೇ.30 ಮಾತ್ರ ನೀರಿದ್ದು, ಇನ್ನೂ ಕೆಲ ಕೆರೆಗಳು ಈಗಾಗಲೇ ಬರಿದಾಗಿವೆ. ಆಗಸ್ಟ್‌ನಲ್ಲಿ ವಾಡಿಕೆ ಮಳೆ 35.9 ಮಿಮೀ ಇದ್ದರೂ 13.5ಮಿಮೀ ಮಳೆ ಆಗುವ ಮೂಲಕ ಶೇ. 62 ಮಳೆ ಕೊರತೆಯಾಗಿದೆ.

ಅಂತರ್ಜಲಕ್ಕೆ ಹೊಡೆತ: ಕಳೆದ ಬಾರಿ ಉತ್ತಮ ಮಳೆಯಿಂದ ಅಂತರ್ಜಲಮಟ್ಟ ಏರಿಕೆ ಕಂಡಿತ್ತು. ಜೂನ್ ವೇಳೆಗೆ ಸರಾಸರಿ ಮಳೆ 24.24 ಮಿಮೀ ದಾಖಲಾಗಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಅಂತರ್ಜಲ ಕುಸಿತ ಕಾಣುತ್ತಿದೆ.


4 ಬಾರಿ ಕೋಡಿ ಹರಿದಿದ್ದ ಜಲಾಶಯ: ದೊಡ್ಡಬಳ್ಳಾಪುರ ನಗರಕ್ಕೆ ಪ್ರಮುಖ ನೀರಿನ ಆಸರೆಯಾಗಿರುವ ಜಕ್ಕಲಮಡು ಜಲಾಶಯದಲ್ಲೂ ನೀರಿನ ಮಟ್ಟ ಕುಸಿಯುತ್ತಿದೆ. ಕಳೆದ ವರ್ಷ 4 ಬಾರಿ ಕೋಡಿ ಹರಿದಿದ್ದ ಜಲಾಶಯದಲ್ಲಿ ನೀರಿನಮಟ್ಟ ಕುಸಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನಗರದಲ್ಲಿ ನೀರಿಗೆ ಹಾಹಾಕಾರ ಏರ್ಪಡುವ ಮುನ್ಸೂಚನೆ ಕಂಡುಬರುತ್ತಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ನಗರಗಳಿಗೆ ಕುಡಿವ ನೀರು ಪೂರೈಸುವ ಪ್ರಮುಖ ಜಲಾಶಯವಾಗಿರುವ ಜಕ್ಕಲಮಡುಗು ಗರಿಷ್ಠ 58 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ ನೀರಿನ ಮಟ್ಟ 40 ಅಡಿಗೆ ಕುಸಿತ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಾರಿ ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯದಲ್ಲಿ ಶೇಖರಣೆಯಾಗಿರುವ ನೀರನ್ನು ಇನ್ನು ಕೇವಲ 4 ತಿಂಗಳು ಬಳಸಬಹುದು ಎಂದು ಅಂದಾಜಿಸಲಾಗಿದೆ.

ಖಾಲಿ ಕೊಡ ಪ್ರದರ್ಶನ: ಈಗಾಗಲೇ ಹಲವು ಗ್ರಾಮಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ನಿರ್ಮಾಣವಾಗಿದ್ದು, ಗ್ರಾಮಸ್ಥರು ನೀರಿಗಾಗಿ ಬಿಂದಿಗೆಗಳನ್ನು ಹಿಡಿದು ಅಲೆದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಇತ್ತೀಚಿಗೆ ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿಯ ಕಾಡತಿಪ್ಪೂರು ಗ್ರಾಮದ ಪರಿಶಿಷ್ಟ ಕಾಲನಿ ಜನರು ಪಂಚಾಯಿತಿ ಎದುರು ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪಿ.ಎನ್.ರವೀಂದ್ರ ಅವರ ಅವಧಿಯಲ್ಲಿ ಹೊಸಕೋಟೆಯಲ್ಲಿ ಡಿಸಿ ಕಾರಿಗೆ ಮುತ್ತಿಗೆ ಹಾಕಿದ್ದ ಗ್ರಾಮಸ್ಥರು ಕುಡಿವ ನೀರಿಗಾಗಿ ಪ್ರತಿಭಟನೆ ನಡೆಸಿದ್ದು ದೊಡ್ಡ ಸದ್ದು ಮಾಡಿತ್ತು. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಕೆಲವೇ ದಿನಗಳಲ್ಲಿ ಜಿಲ್ಲೆಯ ಹಲವು ಕಡೆಗಳಲ್ಲಿ ಕುಡಿವ ನೀರಿಗಾಗಿ ತೀವ್ರ ಸಂಕಷ್ಟ ಎದುರಿಸುವ ಸನ್ನಿವೇಶ ನಿರ್ಮಾಣವಾಗಲಿದೆ ಎಂಬ ಆತಂಕದ ಛಾಯೆ ಆವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net