

ಕುರುಗೋಡು: ಉದ್ಯೋಗ ಖಾತ್ರಿ ಕೂಲಿ ಮೊತ್ತ ಏ.1ರಿಂದ 370 ರೂ.ಗೆ ಹೆಚ್ಚಳವಾಗಿದ್ದು, ಪ್ರತಿಯೊಬ್ಬರೂ ಗ್ರಾಪಂಗೆ ಬೇಡಿಕೆ ಸಲ್ಲಿಸಿ ಕೆಲಸ ಪಡೆಯಬೇಕು. ವರ್ಷಕ್ಕೆ 100 ದಿನ ಕೆಲಸ ಮಾಡಲು ಅವಕಾಶವಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ರಾಜ್ಯ ದಿಶಾ ಸಮಿತಿ ಸದಸ್ಯ ಡಾ.ಎ.ಸಿ.ದಾನಪ್ಪ ಹೇಳಿದರು.
ಚಾನಾಳ್ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಭಾನುವಾರ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಕುಂದುಕೊರತೆ ಆಲಿಸಿ ಮಾತನಾಡಿದರು. ಅಳತೆಗೆ ಅನುಸಾರ ಕೂಲಿ ಪಾವತಿಯಾಗುತ್ತದೆ. ಪ್ರತಿ ದಿನ ಎನ್‌ಎಂಎಂಎಸ್ ಮೂಲಕ ಎರಡು ಹಾಜರಾತಿ ಕಡ್ಡಾಯವಾಗಿದ್ದು ತಪ್ಪದೆ ಹಾಕಿಸಬೇಕು. ಗ್ರಾಮೀಣ ಭಾಗದ ಜನರ ಜೀವನಕ್ಕೆ ನರೇಗಾ ಆಸರೆಯಾಗಿದೆ. ಪ್ರತಿಯೊಬ್ಬರೂ ಯೋಜನೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು. ಮೇಟಿಗಳಾದ ತಿಮ್ಮಪ್ಪ, ವೆಂಕಟೇಶ್ ಇತರರಿದ್ದರು.