

ಲಕ್ಷ್ಮೇಶ್ವರ: ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ. ತಾಲೂಕಿನ ಅಡರಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈ ಭಾಗದ ಜನರ ಆಶಾಕಿರಣವಾಗಿದೆ.
ಸಂಪೂರ್ಣ ಗಣಕೀಕರಣದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ವಹಿವಾಟು ಹೆಚ್ಚಳಗೊಂಡಿದೆ. ಸಂಘವು 1950ರಲ್ಲಿ ಕಾರ್ಯಾರಂಭಿಸಿದ್ದು, ಅಡರಕಟ್ಟಿ, ಹರದಗಟ್ಟಿ, ಕೊಂಡಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ 904 ಸದಸ್ಯರನ್ನು ಒಳಗೊಂಡು ತಾಲೂಕಿನಲ್ಲಿಯೇ ಜನಮನ್ನಣೆ ಪಡೆದಿದೆ. ವಿವಿಧ ಸೇವೆಯೊಂದಿಗೆ ಜನಸ್ನೇಹಿಯಾಗಿರುವ ಸಹಕಾರ ಸಂಘವು ಗ್ರಾಮೀಣ ಮಟ್ಟದಲ್ಲಿ ಬ್ಯಾಂಕಿಂಗ್ ಸೇವೆಯ ಜತೆಗೆ ಕೃಷಿ ಸಂಬಂಧಿತ, ವಾಹನ ಖರೀದಿ ಸಾಲ ನೀಡುವುದರಲ್ಲಿ ಮಂಚೂಣಿಯಲ್ಲಿದೆ.
ಸಂಘವು ವಿವಿಧ ಠೇವಣಿ ಸಂಗ್ರಹಿಸುತ್ತದೆ. ಸದಸ್ಯರಿಗೆ ಸ್ವಸಹಾಯ ಸಂಘಗಳ ಸಾಲ, ಚಿನ್ನಾಭರಣ ಸಾಲ, ವ್ಯಾಪಾರ ಸಾಲ, ಯಶಸ್ವಿನಿ ಯೋಜನೆ, ಕೃಷಿ ಯಂತ್ರೋಪಕರಣ, ಸಣ್ಣ ವ್ಯಾಪಾರ, ಠೇವಣಿಗಳ ಮೇಲಿನ ಸಾಲ ನೀಡುತ್ತಿದ್ದು, ಅಲ್ಪಾವಧಿ ಬೆಳೆ ಸಾಲ ಮತ್ತು ಮಾಧ್ಯಮಿಕ ಸಾಲಗಳನ್ನು ಸರ್ಕಾರದ ಯೋಜನೆಯಡಿ ಬಡ್ಡಿ ರಹಿತ/ಕಡಿಮೆ ಬಡ್ಡಿ ದರದಲ್ಲಿ ನೀಡುತ್ತಿದೆ. ಸಂಘದಿಂದ ಪಡಿತರ ಧಾನ್ಯವನ್ನೂ ವಿತರಿಸಲಾಗುತ್ತಿದೆ. ಸಂಘವು ಸ್ಥಾಪನೆಗೊಂಡಾಗಿಂದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯುತ್ತಿದೆ.
ಸಂಘದ ಸೇವೆಗಳು: ಸರ್ಕಾರದ ಬೆಂಬಲ ಬೆಲೆಯಲ್ಲಿ ರೈತರಿಂದ ಹೆಸರು ಮತ್ತು ಕಡಲೆ ಕಾಳು ಖರೀದಿಸಿ ಸಕಾಲದಲ್ಲಿ ರೈತರಿಗೆ ಹಣ ಪಾವತಿಸುತ್ತಿದೆ. ರೈತರು ಲಾಭದಾಯಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಅನುಕೂಲವಾಗಲೆಂದು ಕೃಷಿ ಇಲಾಖೆಯಿಂದ ಸಂಘದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಬೀಜ, ಗೊಬ್ಬರ, ಕೃಷಿ ಪರಿಕರಗಳನ್ನು ಯೋಗ್ಯ ಬೆಲೆಗೆ ಮಾರಾಟ ಮಾಡುತ್ತಿದೆ. ಕೃಷಿ, ಕೃಷಿಯೇತರಕ್ಕೂ ಸಾಲ ಸೌಲಭ್ಯ ನೀಡಲಾಗುತ್ತಿದೆ.
ಸಣ್ಣ ಪ್ರಮಾಣದ ಷೇರು ಬಂಡವಾಳದಿಂದ ಸ್ಥಾಪಿತವಾಗಿ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಸಹಕಾರ ಸಂಘವು ಪ್ರಗತಿಯ ಪಥದತ್ತ ದಾಪುಗಾಲಿಡುತ್ತಿದೆ. ಈ ಒಂದು ಬೆಳವಣಿಗೆಗೆ ಪ್ರಮುಖ ಕಾರಣಕರ್ತರೆಂದರೆ ಸಂಘದ ಆಡಳಿತ ಮಂಡಳಿ, ಸದಸ್ಯರು ಹಾಗೂ ಸಿಬ್ಬಂದಿ. ಸಂಘದ 74 ವರ್ಷಗಳ ಪ್ರಗತಿಗೆ ಶ್ರಮಿಸಿದ ಎಲ್ಲರೂ ಸ್ಮರಣೀಯರು. 25 ವರ್ಷಗಳಿಂದ ರೈತರಿಗೆ ಶೆ.8 ಡಿವಿಡೆಂಡ್ ಕೊಡುತ್ತ ಬಂದಿದ್ದು, ಗದಗ ಜಿಲ್ಲೆಗೆ ಮಾದರಿಯಾಗಿದೆ. ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಸಂಘದ ಗುರಿಯಾಗಿದೆ. | ಬಸವರಾಜ ಹವಳದ, ಅಡರಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ಅಮೃತ ಮಹೋತ್ಸವ ಇಂದು
ಸಂಘದ ಅಮೃತ ಮಹೋತ್ಸವ ಮೇ 7ರಂದು ಬೆಳಗ್ಗೆ 10.30ಕ್ಕೆ ಬಾಳೆಹೊನ್ನೂರು ರಂಭಾಪುರಿ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರು ಸಾನ್ನಿಧ್ಯ ವಹಿಸುವರು. ಮುಕ್ತಿಮಂದಿರ, ಗಂಜಿಗಟ್ಟಿ, ಬನ್ನಿಕೊಪ್ಪದ ಶಿವಾಚಾರ್ಯರು ಉಪಸ್ಥಿತರಿರುವರು. ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಮಹಾಂತೇಶ ಬಸಪ್ಪ ಹವಳದ ಅಧ್ಯಕ್ಷತೆ ವಹಿಸುವರು. ಶಿವಕುಮಾರಗೌಡ ಪಾಟೀಲ, ಲಿಂಗರಾಜ ಎಸ್. ಚಪ್ಪರದಳ್ಳಿ, ನಿಂಗನಗೌಡ ಎಂ. ಮರಿಗೌಡ್ರ, ಜಿ.ಪಿ. ಪಾಟೀಲ, ಸಿ.ಎಂ ಪಾಟೀಲ, ಜಿ.ವಿ. ಪಾಟೀಲ ಇತರರು ಪಾಲ್ಗೊಳ್ಳುವರು.