

ಚಿಕ್ಕಬಳ್ಳಾಪುರ: ಗ್ರಾ.ಪಂ.ಗಳ ಅಧ್ಯ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 157 ಗ್ರಾ.ಪಂ.ಗಳಿವೆ. ಕಳೆದ 2020 ನೇ ಸಾಲಿನ ಡಿಸೆಂಬರ್‌ನಲ್ಲಿ 152 ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿತ್ತು. 2390 ಸ್ಥಾನಗಳಿಗೆ 6181 ಅಭ್ಯರ್ಥಿಗಳು ಸ್ಪರ್ಧಿಸಿದ್ದು ತೀವ್ರ ಪೈಪೋಟಿಯ ನಡುವೆ ಅಭ್ಯರ್ಥಿಗಳು ಗೆಲುವು ಸಾದಿಸಿದ್ದರು. ಬಳಿಕ ಬಹುಮತ ಮತ್ತು ರಾಜಕೀಯ ತಂತ್ರಗಾರಿಕೆಯಲ್ಲಿ ಶಾಸಕರು, ಮಾಜಿ ಶಾಸಕರು ಮತ್ತು ನಾಯಕರು ಬೆಂಬಲಿತರಿಗೆ ಆಯಾ ವ್ಯಾಪ್ತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿಯನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮೊದಲನೇ ಹಂತದ ಅಧಿಕಾರಾವಧಿ ಮುಗಿದಿದ್ದು ಈಗ ಎರಡನೇ ಅವಧಿಗೆ ಹೊಸದಾಗಿ ಮೀಸಲಾತಿಯನ್ನು ನಿಗದಿಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ವ್ಯಾಪ್ತಿಯಲ್ಲಿ ಚುನಾಯಿತ ಗ್ರಾ.ಪಂ.ಸದಸ್ಯರನ್ನೊಳಗೊಂಡ ಸಭೆಗಳು ಬಿರುಸಿನಿಂದ ನಡೆಯುತ್ತಿವೆ.
* ಗಾದಿಗಾಗಿ ಕಸರತ್ತು
ಈಗಾಗಲೇ ಆಕಾಂಕ್ಷಿಗಳು ಗಾದಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಅನುಕೂಲಕರ ಮೀಸಲಾತಿ ಸಿಕ್ಕಿದ್ದಲ್ಲಿ ಹೆಚ್ಚಿನ ಬೆಂಬಲಿತರನ್ನು ಜತೆಗಿರಿಸಿಕೊಂಡು ಬಹುಮತದ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯ್ಯಕ್ಷ ಸ್ಥಾನವನ್ನು ಅಲಂಕರಿಸುವ ಲೆಕ್ಕಾಚಾರದಲ್ಲಿದ್ದಾರೆ.
ಹಳ್ಳಿಗಳಲ್ಲಿ ಆಯಾ ಹಂತದಲ್ಲಿ ಗ್ರಾ.ಪಂ.ವಾರು ಬಿರುಸಿನಿಂದ ಸಭೆಗಳು ನಡೆಯುತ್ತಿವೆ. ಸದಸ್ಯರು ಸ್ವಪಕ್ಷೀಯ ಶಾಸಕರು ಮತ್ತು ನಾಯಕರನ್ನು ಸಂಪರ್ಕಿಸಿ, ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಗ್ರಾಮೀಣ ಭಾಗದ ಹೆಚ್ಚಿನ ಪ್ರಾಬಲ್ಯವೇ ಚುನಾವಣೆಗಳಲ್ಲಿ ಸುಲಭ ಗೆಲುವಿಗೆ ಸಹಕಾರಿ. ಇದಕ್ಕೆ ಗ್ರಾ.ಪಂ.ಗಳನ್ನು ಹಿಡಿದುಕೊಳ್ಳಲು ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕೆಂಬುದು ರಾಜಕೀಯ ನಾಯಕರ ಲೆಕ್ಕಾಚಾರ.