

ಎನ್.ಆರ್.ಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇಂದು ಮಹಿಳೆಯರು ಸಬಲರಾಗಿದ್ದಾರೆ ಎಂದು ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಹೇಳಿದರು.
ಶೆಟ್ಟಿಕೊಪ್ಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಶ್ರೀ ದುಗಾರ್ಂಬ ಜ್ಞಾನ ವಿಕಾಸ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಶಿಸ್ತು, ವ್ಯವಹಾರ ಜ್ಞಾನ, ಸಂಘಟನೆ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳಿಂದ ಸದಸ್ಯರಿಗೆ ಅನುಕೂಲವಾಗುತ್ತಿದೆ. ಮಹಿಳೆಯರು ಸ್ವಾವಲಂಭಿಯಾಗಿ ಬದುಕಲು ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉಪನ್ಯಾಸ, ಮಾಹಿತಿ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ಸದಸ್ಯರು ತಾವು ಕಲಿತಿರುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶೆಟ್ಟಿಕೊಪ್ಪ ವಲಯ ಮೇಲ್ವಿಚಾರಕ ಸತೀಶ್ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಶಿಕ್ಷಣ, ಕಾನೂನು, ಆರೋಗ್ಯ, ಅಧ್ಯಯನ ಪ್ರವಾಸ, ಪೌಷ್ಠಿಕ ಆಹಾರ ಸೇರಿದಂತೆ ಹಲವಾರು ವಿಚಾರ, ಮಾಹಿತಿಯನ್ನು ತಿಳಿಸಲಾಗುತ್ತದೆ. ಪ್ರತಿ ತಿಂಗಳ ಮಾಸಿಕ ಸಭೆಗೆ ಸದಸ್ಯರು ತಪ್ಪದೆ ಹಾಜರಾಗಬೇಕು ಎಂದು ಸಲಹೆ ನೀಡಿದರು.
ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯ ಇರುವ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬಂದು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದರು. ಕಡಹಿನಬೈಲು ಒಕ್ಕೂಟದ ಅಧ್ಯಕ್ಷ ಎ.ವಿ.ಎಲ್ದೋ, ಮಹಾಗಣಪತಿ ಸಂಘದ ಅಧ್ಯಕ್ಷೆ ಶಶಿಪ್ರಭ, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾ, ಒಕ್ಕೂಟದ ಉಪಾಧ್ಯಕ್ಷೆ ಶಶಿಕಲಾ, ಸುಮಿತ್ರ, ಸೇವಾ ಪ್ರತಿನಿಧಿ ನಿದರ್ಶನ್ ಇದ್ದರು.