ನೌಕರರ ಹೋರಾಟಕ್ಕೆ ದರ್ಶನ್, ಸಿಎಸ್ಪಿ ಬೆಂಬಲ: ನಾಲ್ಕನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಹೋರಾಟ

Rural development and panchayat raj department employees protest Mandya
Published on

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರು ನಗರದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ನಾಲ್ಕನೇ ದಿನ ಪೂರೈಸಿತು.

ಜಿಲ್ಲಾ ಪಂಚಾಯಿತಿ ಕಚೇರಿ ಎದುರು ನಡೆಯುತ್ತಿರುವ ನೌಕರರ ಪ್ರತಿಭಟನೆ ಬೆಂಬಲಿಸಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪಾಲ್ಗೊಂಡರು.

ಸಿ.ಎಸ್.ಪುಟ್ಟರಾಜು ಮಾತನಾಡಿ, ನೌಕರರು ಹಾಗೂ ಸದಸ್ಯರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ರಾಜ್ಯಸರ್ಕಾರ ಕೂಡಲೇ ವಾಗ್ದಾನ ನೀಡಬೇಕು. ಗ್ರಾಮ ಪಂಚಾಯಿತಿ ವ್ಯವಸ್ಥೆ ಬಹುಮುಖ್ಯವಾಗಿದೆ. ಸರ್ಕಾರದ ಪ್ರತಿ ಕೆಲಸವೂ ಗಾಪಂನಿಂದಲೇ ಆಗಬೇಕಾಗಿದೆ. ಆದರೆ ಇಂದು ಅವರು ಬೀದಿಯಲ್ಲಿ ಬಂದು ನಿಲ್ಲುವ ಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ನೌಕರರ ಪದಾಧಿಕಾರಿಗಳ ರಾಜ್ಯಮಟ್ಟದಲ್ಲಿ ಸಭೆ ಕರೆದು ಸಾಧಕ ಬಾಧಕಗಳ ಚರ್ಚೆ ಮೂಲಕ ಮಾತುಕತೆ ನಡೆಸಬೇಕು. ಅವರ ನ್ಯಾಯಯುತ ಬೇಡಿಕೆಗಳನ್ನು ಸಮಯ ನಿಗದಿಪಡಿಸಿ ಈಡೇರಿಸುವ ವಾಗ್ದಾನ ನೀಡಬೇಕು. ಬೇಡಿಕೆ ಈಡೇರಿಸಲು ತಕ್ಷಣ ಸಾಧ್ಯವಾಗದಿದ್ದರೆ ಗಡುವು ನಿಗದಿಪಡಿಸಿ ತಮ್ಮ ಇತಿಮಿತಿಯಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸ್ಪಂದಿಸದಿದ್ದರೆ ರಾಜಕೀಯ ರೂಪ ಪಡೆಯಲಿದೆ. ಅದಕ್ಕೆ ಅವಕಾಶ ನೀಡದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಈ ಹೋರಾಟವನ್ನು ಅಂತ್ಯಕ್ಕೆ ಕೊಂಡೊಯ್ಯಬೇಕು. ಸಚಿವರು ಸೇರಿದಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ ಅವರು, ಗ್ರಾಪಂ ನೌಕರರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ನನ್ನನ್ನೂ ಸೇರಿದಂತೆ ಜನಪ್ರತಿನಿಧಿಗಳು ನಿಮ್ಮ ಕೆಲಸ ಮಾಡಲು ಬಿಡುತ್ತಿಲ್ಲ ಎಂಬುದು ವಾಸ್ತವವಾಗಿದೆ. ಆದ್ದರಿಂದ ನಿಮ್ಮ ನ್ಯಾಯಯುತ ಬೇಡಿಕೆಗಳು ಈಡೇರಬೇಕು ಎಂದರು.

ನೌಕರರ ಕೆಲಸದ ಮೇಲೆ ಸಾಕಷ್ಟು ಒತ್ತಡ ಇದೆ. ತಳಮಟ್ಟದ ಪ್ರತೀ ಸಾಮಾನ್ಯ ಜನರ ಯಾವುದೇ ಕೆಲಸಗಳು ಅಧಿಕಾರಿ, ನೌಕರರ ಮೇಲೆಯೇ ಅವಲಂಬಿತವಾಗಿದೆ. ಆ ಕೆಲಸಗಳು ಸುಲಭವಾಗಿ ನಡೆಯಲು ಸ್ವಾತಂತ್ರ್ಯ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ನೌಕರರ ಹೋರಾಟ ಯಶಸ್ವಿಯಾಗಲಿ ಎಂದು ಹೇಳಿದರು.

ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ಎಂ.ಎಸ್.ರಘುನಂದನ್, ಮುಖಂಡ ಬಿ.ಆರ್.ಸುರೇಶ್, ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್‌ಬಾಬು, ಗ್ರಾಪಂ ಸದಸ್ಯರ ಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್, ಮಹೇಶ್, ಪ್ರದೀಪ್ ಸಿದ್ದೇಗೌಡ, ಸುವರ್ಣಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net