ಜಿಲ್ಲೆಯ ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ

dc visit
dc visit to election centre
Published on

ಅಧಿಕಾರಿಗಳೊಂದಿಗೆ ವ್ಯವಸ್ಥೆಗಳ ಪರಿಶೀಲನೆ- ಮಸ್ಟರಿಂಗ್ ಕೇಂದ್ರ ತಲುಪಿದ ಸಿಬ್ಬಂದಿ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಮತಯಂತ್ರಗಳು ಹಾಗೂ ಚುನಾವಣಾ ಸಾಮಾಗ್ರಿಗಳನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯವು ಮಂಗಳವಾರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಿತು.
ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಮತಗಟ್ಟೆ ಬಂದೋಬಸ್ತ್‌ಗಾಗಿ ನಿಯೋಜಿತಗೊಂಡಿರುವ ಪೊಲೀಸರು ಹಾಗೂ ಗೃಹ ರಕ್ಷಕದಳದ ಸಿಬ್ಬಂದಿ ಕರೆದುಕೊಂಡು ಹೋಗಲು ಆಯಾ ಮಸ್ಟರಿಂಗ್ ಕೇಂದ್ರಗಳ ಆವರಣದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಚುನಾವಣಾ ಪ್ರಕ್ರಿಯೆಗೆ ನೇಮಿಸಲಾದ ಅಧಿಕಾರಿಗಳು, ಸಿಬ್ಬಂದಿಗೆ ತಾವು ತೆರಳಬೇಕಿರುವ ಮತಗಟ್ಟೆಯ ವಿವರ, ಬಸ್‌ಗಳ ವಿವರವನ್ನು ತಿಳಿಸಲು ಹಾಗೂ ಚುನಾವಣಾ ಸಾಮಾಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆಯನ್ನು ವಿತರಿಸಲು ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಆ ಮೂಲಕ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಸಾಮಾಗ್ರಿ ವಿತರಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯಿತು. ಯಾವುದೇ ಅಧಿಕಾರಿ, ಸಿಬ್ಬಂದಿಗೆ ಗೊಂದಲಕ್ಕೆ ಆಸ್ಪದವಿಲ್ಲದಂತೆ ಮಸ್ಟರಿಂಗ್ ಕಾರ್ಯಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಕೈಗೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಮೇ 10ರ ಮತದಾನ ದಿನದಂದು ಮತಗಟ್ಟೆ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿ ಮಂಗಳವಾರ ಬೆಳಗ್ಗೆ ಮಸ್ಟರಿಂಗ್ ಕೇಂದ್ರಗಳಿಗೆ ಹಾಜರಾಗಿದ್ದರು. ನಂತರ ಮತಗಟ್ಟೆಗಳಿಗೆ ತೆರಳಲು ಕಲ್ಪಿಸಲಾಗಿದ್ದ ಬಸ್‌ಗಳಲ್ಲಿ ಚುನಾವಣಾ ಸಾಮಾಗ್ರಿಗಳೊಂದಿಗೆ ಸಂಬಂಧಿಸಿದ ಮತಗಟ್ಟೆಗಳಿಗೆ ಸಂಜೆ 4 ಗಂಟೆಯ ವೇಳೆಗೆ ತೆರಳಿದರು.
ಡಿಸಿಯಿಂದ ಸಲಹೆ ಸೂಚನೆ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದೇವನಹಳ್ಳಿ ಟೌನ್‌ನ ಬಿಬಿ ರಸ್ತೆಯ, ಹೊಸ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಸ್ಟರಿಂಗ್ ಕೇಂದ್ರ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಬಳ್ಳಾಪುರ ತಾಲೂಕು ಮಾದಗೊಂಡನಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಭೇಟಿ ನೀಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗಳು, ಸಿಬ್ಬಂದಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಆಯಾ ವಿಧಾನಸಭಾ ಕ್ಷೇತ್ರದ ಚುನಾವಣೆ ನಿಯೋಜಿತ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಚುನಾವಣಾ ಸಾಮಗ್ರಿಗಳೊಂದಿಗೆ ಹಾಜರಾದ ಸಿಬ್ಬಂದಿ: ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆ ನಾಲ್ಕೂ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ನಿಗಧಿತ ಮಸ್ಟರಿಂಗ್ ಕೇಂದ್ರಗಳಿಗೆ ಮಂಗಳವಾರ ಚುನಾವಣಾ ಸಿಬ್ಬಂದಿ ಚುನಾವಣಾ ಸಾಮಗ್ರಿಗಳೊಂದಿಗೆ ಬಂದಿಳಿದರು. ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ಚುನಾವಣಾ ಸಿಬ್ಬಂದಿಗೆ ಮತದಾನ ಪ್ರಕ್ರಿಯೆ ಸಂಬಂಧ ಮಾರ್ಗದರ್ಶನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net