

ಬಳ್ಳಾರಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಕ್ಷೇತ್ರದ ಜನರ ತುರ್ತು ನೆರವಿಗೆ ಸಹಾಯವಾಣಿ ಆರಂಭಿಸುವ ಜತೆಗೆ ಕಾರ್ಯಪಡೆ ರಚಿಸುವಂತೆ ಶಾಸಕ ಬಿ.ನಾಗೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ತಹಸೀಲ್ದಾರ್, ತಾಪಂ ಇಒ, ಟಿಎಚ್‌ಒ, ಕೃಷಿ, ತೋಟಗಾರಿಕೆ, ಆಹಾರ, ಕುಡಿವ ನೀರು ಸರಬರಾಜು ಸೇರಿ ವಿವಿಧ ಇಲಾಖೆ ಅಧಿಕಾರಿಗಳಿರುವ ತಾಲೂಕು ಮಟ್ಟದ ಕಾರ್ಯಪಡೆ ರಚಿಸಬೇಕು. ಜಿಪಂ, ತಾಪಂ ಹಾಗೂ ಗ್ರಾಪಂ ಜನಪ್ರತಿನಿಧಿಗಳು ಈ ಕಾರ್ಯಪಡೆಯಲ್ಲಿರಬೇಕು. ಜತೆಗೆ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ತಿಳಿಸಿದರು.
ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಆರಂಭಿಸಬೇಕು. ಕೃಷಿ ಉತ್ಪನ್ನಗಳ ಸಾಗಣೆ ಕುರಿತು ರೈತರು ಸಹಾಯವಾಣಿಗೆ ಕರೆ ಮಾಡಿದಾಗ ಸ್ಪಂದಿಸಬೇಕು. ಅಲ್ಲದೆ, ಜನರು ಹೆರಿಗೆ, ಆರೋಗ್ಯ ಸಮಸ್ಯೆಗಳಿಗೂ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಆಸ್ಪತ್ರೆಗೆ ದಾಖಲಿಸಲು ವಾಹನ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ನಾಗೇಂದ್ರ ತಿಳಿಸಿದರು.
ತಾಪಂ ಇಒ ಎಂ.ಬಸಪ್ಪ ಮಾತನಾಡಿ, ಸೋಮವಾರದಿಂದ ಸಹಾಯವಾಣಿ ಕಾರ್ಯಾರಂಭವಾಗಲಿದ್ದು, ಕರೊನಾ ವಿಚಾರ ಹಾಗೂ ಅಗತ್ಯ ಸೇವೆಗಳಿಗಾಗಿ ಜನರು ಕರೆ ಮಾಡಬಹುದು ಎಂದು ತಿಳಿಸಿದರು. ತಹಸೀಲ್ದಾರ್ ಯು.ನಾಗರಾಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.