ಗ್ರಾಮೀಣ ಭಾಗಕ್ಕೂ ಕೆಎಲ್‌ಇ ಆರೋಗ್ಯ ಸೇವೆ

20RAVIG11(KLE)
ಹಾರೂಗೇರಿಯಲ್ಲಿ ಭಾನುವಾರ ಚಿಗುರು ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹಾಗೂ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಉದ್ಘಾಟಿಸಿದರು. ಡಾ.ಎಲ್.ಎಸ್.ಜಂಬಗಿ, ಡಾ.ಎಂ.ಬಿ.ಬೆಲ್ಲದ, ಡಾ.ಎಂ.ಸಿ.ಮೆಟಗುಡ್ಡ, ಡಾ.ಅನಿತಾ ದಲಾಲ, ಡಾ.ಕಮಲ ಪಾಟೀಲ ಇದ್ದರು.
Published on

ಬೆಳಗಾವಿ: ನಗರ ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡಿದ್ದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಇಂದು ಪಟ್ಟಣ ಹಾಗೂ ಗ್ರಾಮೀಣ ಪರಿಸರದಲ್ಲಿಯೂ ಕಾರ್ಯಾರಂಭ ಮಾಡುತ್ತಿರುವುದು ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯ ಪ್ರತೀಕ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಭಾನುವಾರ ‘ಚಿಗುರು ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ’ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನತೆ ತುರ್ತು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗಬೇಕಾಗಿಲ್ಲ. ಎಲ್ಲ ಸೌಕರ್ಯಗಳನ್ನು ಹೊಂದಿರುವ ಅತ್ಯುತ್ತಮ ಆಸ್ಪತ್ರೆಗಳು ಸುತ್ತಮುತ್ತ ತಲೆ ಎತ್ತುತ್ತಿವೆ. ಹಾರೂಗೇರಿ ಶೈಕ್ಷಣಿಕವಾಗಿ ವಿಕಾಸಗೊಂಡಂತೆ ಹೆಲ್ತ್ ಹಬ್ ಕೂಡ ಆಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕೆಎಲ್‌ಇ ಸಂಸ್ಥೆ ಗ್ರಾಮೀಣ ಪ್ರದೇಶಗಳನ್ನೇ ಕೇಂದ್ರವಾಗಿಟ್ಟುಕೊಂಡು ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ನೀಡುತ್ತಿದೆ. 4,500ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯ ಹೊಂದಿರುವ ಕೆಎಲ್‌ಇ ಸಂಸ್ಥೆ ಬೆಳಗಾವಿ, ಪುಣೆ, ಹುಬ್ಬಳ್ಳಿ, ಬೆಂಗಳೂರು ಮೊದಲ್ಗೊಂಡು ಗ್ರಾಮೀಣ ಪ್ರದೇಶಗಳಿಗೂ ಒತ್ತು ನೀಡಿದೆ. ಕಳೆದ ವಾರ ಮಹಾರಾಷ್ಟ್ರದ ಚಂದಗಡದಲ್ಲಿ ಕೆಎಲ್‌ಇ ವೆಲ್‌ನೆಸ್ ಸೆಂಟರ್ ಸ್ಥಾಪಿಸಿದೆ ಎಂದು ಸಂಭ್ರಮಿಸಿದರು.

ಕೆಎಲ್‌ಇ ಸಂಸ್ಥೆ ಅಲೋಪಥಿಕ್-ಆಯುರ್ವೇದಿಕ್-ಹೋಮಿಯೋಪಥಿಕ್ 3 ವಿಧದಲ್ಲಿ ಗುಣಾತ್ಮಕವಾದ ಚಿಕಿತ್ಸೆ ನೀಡುತ್ತಿದೆ. ಬಸವನ ಕುಡಚಿಯಲ್ಲಿ ಹೋಮಿಯೋಪಥಿಕ್ ಆಸ್ಪತ್ರೆ ನಿರ್ಮಾಣದ ಕೊನೆಯ ಹಂತದಲ್ಲಿದೆ. ಹುಬ್ಬಳ್ಳಿಯಲ್ಲಿಯೂ ವೈದ್ಯಕೀಯ ಕಾಲೇಜು ಪ್ರಾರಂಭಗೊಂಡಿದ್ದು, 500 ಕೋಟಿ ರೂ.ವೆಚ್ಚದಲ್ಲಿ 1,200 ಹಾಸಿಗೆಗಳ ಆಸ್ಪತ್ರೆಯ ಕಟ್ಟಡದ ಕೆಲಸ ಭರದಿಂದ ನಡೆದಿದೆ ಎಂದು ಹೇಳಿದರು. ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಎಲ್.ಎಸ್.ಜಂಬಗಿ ಅಧ್ಯಕ್ಷತೆ ವಹಿಸಿದ್ದರು. ಕುಟಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಡಾ.ಎಂ.ಬಿ.ಬೆಲ್ಲದ, ಡಾ.ಎಂ.ಸಿ.ಮೆಟಗುಡ್ಡ, ಡಾ.ಅನಿತಾ ದಲಾಲ, ಡಾ.ಕಮಲ ಪಾಟೀಲ, ಡಾ.ಯಶಿತಾ ಪೂಜಾರ, ಡಾ.ನಂದಿತಾ ಒಡೆಯರ, ಗಿರೀಶ ದರೂರ, ಡಾ.ವಿ.ಎಸ್.ಮಾಳಿ, ರಾಜಶೇಖರ ಮಾಳಿ, ಡಾ.ನಮ್ರತಾ ಮಾಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net