

ಮೈಸೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಫೆ.16 ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಮೇರೆಗೆ ದೇಶಾದ್ಯಂತ ಗ್ರಾಮೀಣ ಬಂದ್ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ರೈತರ ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದು ಇದೀಗ ಹಿಂಬಾಗಿಲ ಮೂಲಕ ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಮುಂದಾಗುತ್ತಿದೆ. ಕಳೆದ ಬಾರಿ ರೈತರಿಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಲು ವಿಫಲವಾಗಿದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಖಾತ್ರಿಗೊಳಿಸುವ ಕಾಯ್ದೆ ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ. ಹೀಗಾಗಿ ಅನಿವಾರ್ಯವಾಗಿ ರೈತರು ಹೋರಾಟಕ್ಕೆ ಇಳಿಯಬೇಕಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೋರಾಟಕ್ಕೆ ದೆಹಲಿಗೆ ತೆರಳುತ್ತಿರುವ ರೈತರನ್ನು ಮಾರ್ಗದ ಮಧ್ಯೆ ತಡೆಯುತ್ತಿರುವುದು ಖಂಡನೀಯ. ಆ ಮೂಲಕ ಕೇಂದ್ರ ಸರ್ಕಾರ ತಾನು ರೈತ ವಿರೋಧಿ ಎಂಬುದನ್ನು ಸಾಬೀತು ಪಡಿಸಿದೆ. ನ್ಯಾಯ ಕೇಳಿ ದೆಹಲಿಗೆ ತೆರಳುತ್ತಿರುವ ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕರೂರು ವೈಶ್ಯ ಬ್ಯಾಂಕ್‌ನ ಕೆಲವು ಅಧಿಕಾರಿಗಳು ಮಧ್ಯವರ್ತಿಗಳ ಮೂಲಕ ರೈತರಿಂದ ದಾಖಲಾತಿ ಪಡೆದು ನಾಲ್ಕು ಲಕ್ಷ ಮಂಜೂರು ಮಾಡಿದರೂ ರೈತರಿಗೆ ಕೇವಲ ಎರಡು ಲಕ್ಷ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್ ನಡೆಸಿದ ಆಂತರಿಕ ತನಿಖೆಯಿಂದ ಈ ಸತ್ಯಾಂಶ ಬಯಲಿಗೆ ಬಂದಿದೆ. ಆದರೆ, ಇದೀಗ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ರೈತರ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ. ಬ್ಯಾಂಕ್‌ನ ರೈತ ವಿರೋಧಿ ನೀತಿಯ ವಿರುದ್ಧ ಫೆ.19 ರಂದು ನಗರದಲ್ಲಿರುವ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.