ರೈತರು ಸೌಲಭ್ಯ ಸಮರ್ಪಕವಾಗಿ ಬಳಸಿಕೊಳ್ಳಲಿ: ಸಹಾಯಕ ಕೃಷಿ ನಿರ್ದೇಶಕಿ ಡಾ.ಸೌಮ್ಯಾ ಸಲಹೆ

1 (3)
Published on

ಮಂಡ್ಯ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಲಾಗುವ ಸೌಲಭ್ಯವನ್ನು ಬಳಸಿಕೊಂಡು ಕೃಷಿಯಲ್ಲಿ ಲಾಭ ಗಳಿಸಬೇಕೆಂದು ರೈತರಿಗೆ ಸಹಾಯಕ ಕೃಷಿ ನಿರ್ದೇಶಕಿ ಡಾ.ಸೌಮ್ಯಾ ಸಲಹೆ ನೀಡಿದರು.

ತಾಲೂಕಿನ ಮೊಳೆಕೊಪ್ಪಲು ಗ್ರಾಮದಲ್ಲಿ ನಬಾರ್ಡ್, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ವರದಾನವಾಗಿದೆ. ಈ ಯೋಜನೆಯ ಫಲಪ್ರದವನ್ನು ಪಹಣಿ ಹೊಂದಿರುವ ಪ್ರತಿ ರೈತರು ಪಡೆದುಕೊಳ್ಳಬಹುದು ಎಂದರು.

ಬೆಳೆ ವಿಮೆಗೆ ಸಂಬಂಧಿಸಿದಂತೆ ವಿವಿಧ ಬೆಳೆಗಳಿಗೆ ಇರುವ ಮೊತ್ತ ಮತ್ತು ತರುವಾಯ ರೈತ ಪಡೆಯುವ ಮೊತ್ತದ ವಿವರಗಳನ್ನು ಸವಿಸ್ತಾರವಾಗಿ ತಿಳಿದುಕೊಳ್ಳಬೇಕು. ಮಾತ್ರವಲ್ಲದೆ ತಪ್ಪದೇ ವಿಮೆ ಮಾಡಿಸಿಕೊಳ್ಳಬೇಕು. ರೈತರು ಪರಾವಲಂಬಿಯಾಗದೆ ಸ್ವಾವಲಂಬಿಯಾಗಲು ಹಲವು ಕಾರ್ಯಕ್ರಮಗಳನ್ನು ಸರ್ಕಾರಗಳು ರೂಪಿಸಿವೆ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಅಸಂಘಟಿತವಾಗಿರುವ ಕೃಷಿ ಸಾಕ್ಷರತೆಯ ಮೂಲಕ ಅರಿವು ಮೂಡಿಸಬೇಕಿದೆ ಎಂದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಬೆಳೆ ಪದ್ಧತಿಗಳನ್ನು ಅಳವಡಿಸಿಕೊಂಡು ನೀರು ನಿರ್ವಹಣೆ ಮಾಡುವುದು ಪ್ರಸ್ತುತ ದಿನಗಳಲ್ಲಿ ಅನಿವಾರ್ಯವಾಗಿದೆ. ರೈತರು ಒಗ್ಗಟ್ಟಾಗಿ ಸಹಭಾಗಿತ್ವದಲ್ಲಿ ನೀರು ನಿರ್ವಹಣೆ ಸಮರ್ಪಕವಾಗಿ ಮಾಡಬೇಕು. ಏಕಕಾಲದಲ್ಲಿ ಆ ಪ್ರದೇಶದಲ್ಲಿ ಎಲ್ಲ ರೈತರೂ ಸೇರಿ ಕಬ್ಬನ್ನು ಬೆಳೆದಾಗ ಮಾರುಕಟ್ಟೆ ಮತ್ತು ನೀರು ನಿರ್ವಹಣೆಗಳಲ್ಲಿ ವ್ಯತ್ಯಾಸವಾಗುತ್ತದೆ. ಅದರ ಬದಲು ಭತ್ತ, ಕಬ್ಬು ಇತರೆ ಬೆಳೆಗಳನ್ನು ಸಹಭಾಗಿತ್ವದಲ್ಲಿ ಬೆಳೆಯಬೇಕಾಗಿದೆ ಎಂದರು.

ಬ್ಯಾಂಕ್ ಆಫ್ ಬರೋಡಾ ಆರ್ಥಿಕ ಸಮಾಲೋಚಕಿ ಕೆ.ಪಿ.ಅರುಣಕುಮಾರಿ, ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ಪುರಂದರ, ಅಂಗವಿಕಲ ಸಂಘದ ಅಧ್ಯಕ್ಷ ಬಾಲು, ಸಂಘಟಕಿ ಅಂಬುಜಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net