

ಸಿರಿಗೆರೆ: ಗ್ರಾಮೀಣ ಪ್ರದೇಶದ ಕಲೆ ಉಳಿಸಿ, ಬೆಳೆಸುವ ಹೊಣೆ ಪ್ರತಿಯೊಬ್ಬರದ್ದೂ ಆಗಿದೆ ಎಂದು ಶಿವಮೊಗ್ಗದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಎಂ.ಎನ್.ಸುಂದರರಾಜ್ ಅಭಿಪ್ರಾಯಪಟ್ಟರು.
ಶ್ರೀ ಗುರುಶಾಂತ ರಾಜದೇಶಿಕೇಂದ್ರ ಸ್ವಾಮೀಜಿ ಅವರ 85ನೇ ಶ್ರದ್ಧಾಂಜಲಿ ಅಂಗವಾಗಿ ತರಳಬಾಳು ಮಠದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಜನಪದ ಕಲಾವಿದರು ಬದುಕಿನಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆಯು ಅವರು ತಮ್ಮಲ್ಲಿನ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಯಲಿ ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ವರ್ಗದವರಿಗೆ ಜನರ ಪ್ರೋತ್ಸಾಹ ಅಗತ್ಯ ಎಂದರು.
ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ.ಎಸ್.ಬಿ.ರಂಗನಾಥ್, ಜನಪದ ಪ್ರಶಸ್ತಿ ಪುರಸ್ಕೃತ ಡಾ.ಬಸಪ್ಪ ಮಾಸ್ಟರ್ ಇತರರಿದ್ದರು. ರಾಜ್ಯದ ವಿವಿಧೆಡೆಯಿಂದ 30 ಕಲಾತಂಡಗಳು ಭಾಗವಹಿಸಿದ್ದವು.