

ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗವು ಪ್ರಯಾಣಿಕರ ಸುರಕ್ಷತೆ ಹಾಗೂ ಅಪಘಾತ ರಹಿತ ಪ್ರಯಾಣಕ್ಕೆ ಒತ್ತು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ರೈಲು ಚಾಲನೆ ಮಾಡುವ ಲೋಕೋಪೈಲಟ್ ಗಳ ಹಿತ ಕಾಯಲು ಅತ್ಯುನ್ನತ ದರ್ಜೆಯ ಸೌಲಭ್ಯಗಳನ್ನು ನೀಡುತ್ತಿದೆ.
ಇಲ್ಲಿಯ ಶ್ರೀ ಸಿದ್ಧಾರೂಢಸ್ವಾಮಿ ರೈಲು ನಿಲ್ದಾಣ ಬಳಿ ನೂತನ ರನ್ನಿಂಗ್ ರೂಮ್ ನಿರ್ಮಿಸಲಾಗಿದ್ದು, ಇಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಲೋಕೋಪೈಲಟ್ ಹಾಗೂ ರೈಲು ವ್ಯವಸ್ಥಾಪಕರು (ಟೆನ್ ಮ್ಯಾನೇಜರ್) ಇಲ್ಲಿ ನಿಶ್ಚಿಂತರಾಗಿ ವಿಶ್ರಾಂತಿ ಪಡೆಯಬಹುದಾಗಿದೆ.
ಇಲ್ಲಿರುವ ಸೌಲಭ್ಯಗಳ ಮಾಹಿತಿ ನೀಡಿದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಟಿ.ವಿ. ವಿಷ್ಣುಭೂಷಣ ಅವರು, ನೈಋತ್ಯ ರೈಲ್ವೆಯು ಲೋಕೋಪೈಲಟ್ ಗಳ ಆರೈಕೆ, ಆರಾಮಕ್ಕೆ ಹೆಚ್ಚಿನ ಗಮನ ನೀಡುತ್ತಿದೆ. ರೈಲ್ವೆ ಪ್ರಯಾಣಿಕರ ಸುರಕ್ಷತೆಯೇ ಇದರ ಹಿಂದಿನ ಉದ್ದೇಶ ಎಂದರು.
ಲೋಕೋಪೈಲಟ್ ಹಾಗೂ ರೈಲು ವ್ಯವಸ್ಥಾಪಕರ ಕಲ್ಯಾಣಕ್ಕಾಗಿ ಇಲ್ಲಿ 24 ಗಂಟೆ ತೆರೆದಿರುವ ರನ್ನಿಂಗ್ ರೂಮ್ ನಿಮಿರ್ಸಲಾಗಿದೆ. ವಾತಾನುಕೂಲಿ ಕೊಠಡಿಗಳು, ಫ್ಯಾನ್, ಲೈಟಿಂಗ್, ಓದುವ ದೀಪ, ಹಾಸಿಗೆ, ಸೊಳ್ಳೆ ಪರದೆ, ಇತ್ಯಾದಿ ಸೌಲಭ್ಯಗಳಿವೆ.
ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ (ಪವರ್) ಜೆ.ಎಸ್. ರುದ್ರಸ್ವಾಮಿ ಮಾತನಾಡಿ, ರುಚಿಕರ ಹಾಗೂ ತಾಜಾ ಆಹಾರ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಅಗತ್ಯವಿದ್ದರೆ ಪಾರ್ಸಲ್ ಕೂಡ ಅವರು ಕೊಂಡೊಯ್ಯಬಹುದು. ಶುದ್ಧ ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರು, ಮನರಂಜನೆಗಾಗಿ ವಿವಿಧ ಆಟಗಳು, ಫುಟ್ ಮಸಾಜರ್, ಮೈಕ್ರೋವೇವ್ ಓವನ್, ಶೂ ಪಾಲಿಶರ್, ಓದುವ ಕೋಣೆ, ಭೋಜನ ಕೊಠಡಿ ಸೇರಿ ಯಾವುದೂ ಕೊರತೆಯಾಗದಂತೆ ಎಲ್ಲ ಅಗತ್ಯಗಳನ್ನು ಒದಗಿಸಲಾಗಿದೆ ಎಂದರು.
ವಿಶೇಷವಾಗಿ ಧ್ಯಾನ ಕೊಠಡಿಯನ್ನು ರಚನೆ ಮಾಡಲಾಗಿದ್ದು, ಯೋಗ, ಧ್ಯಾನ ಮಾಡಬಹುದು. ಒಟ್ಟಾರೆ ಸಂಪೂರ್ಣ ವಿಶ್ರಾಂತಿಯ ತಾಣ ಇದಾಗಿದೆ. ಹುಬ್ಬಳ್ಳಿ ವಿಭಾಗದ ವಿವಿಧ ರೈಲು ನಿಲ್ದಾಣಗಳಲ್ಲಿ 9 ಕಡೆಗಳಲ್ಲಿ ಇಂತಹ ರನ್ನಿಂಗ್ ರೂಮ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಅರಸಿಕೆರೆಯಿಂದ ಬಂದಿದ್ದ ಲೋಕೋಪೈಲಟ್ ಶ್ಯಾಮಕುಮಾರ, ಇಲ್ಲಿ ಮನೆಗಿಂತ ಅತ್ಯುತ್ತಮವಾದ ವಾತಾವರಣ ನಿರ್ಮಿಸಲಾಗಿದೆ. ಊಟ, ಉಪಹಾರ ಅತ್ಯಂತ ಹೈಜೆನಿಕ್ ಆಗಿದೆ. ವಿಶ್ರಾಂತಿ ಭರಪೂರ ಸಿಗುತ್ತದೆ. ಇದರಿಂದ ನಾವು ಯಾವುದೇ ತೊಂದರೆ ಇಲ್ಲದೇ ರೈಲು ಚಾಲನೆ ಮಾಡಲು ಅನುಕೂಲವಾಗುತ್ತದೆ ಎಂದು ಅನುಭವ ಹಂಚಿಕೊಂಡರು.
ಸಾರ್ವಜನಿಕ ಸಂಪರ್ಕಾಧಿಕಾರಿ ರಾಜಕುಮಾರ್ ಡಿ., ಇತರ ಅಧಿಕಾರಿಗಳು ಉಪಸ್ಥಿತರಿದ್ದರು.