ಡಿ.17ರಂದು ನಗರದಲ್ಲಿ ಕನ್ನಡಕ್ಕಾಗಿ ಓಟ: ಶಾಸಕ ರವಿಕುಮಾರ್ ಗಣಿಗ ಮಾಹಿತಿ

Running for Kannada Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಪ್ರತಿಯೊಬ್ಬರೂ ತೊಡಗಿಕೊಳ್ಳುವ ಉದ್ದೇಶದಿಂದ ಡಿ.17ರಂದು ಕನ್ನಡಕ್ಕಾಗಿ ಓಟ ಎಂಬ ಘೋಷವಾಕ್ಯದಡಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ನಗರ ಅಲಂಕಾರ ಸಮಿತಿ ಅಧ್ಯಕ್ಷರೂ ಆದ ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಸುಮಾರು 1.50 ರಿಂದ 2 ಲಕ್ಷ ಜನಸಂಖ್ಯೆಯಿದೆ. ಅವರೆಲ್ಲರೂ ಕನ್ನಡ ಸಾಹಿತ್ಯ ಸಮ್ಮೇಳನದ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆನ್ನುವ ಉದ್ದೇಶದಿಂದ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 17ರಂದು ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಿಂದ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಸ್ಯಾಂಜೊ ಆಸ್ಪತ್ರೆಯ ಹಿಂಭಾಗದವರೆಗೆ ಸಮ್ಮೇಳನ ನಡೆಯುವ ಸ್ಥಳದವರೆಗೆ ನಡೆಯಲಿದೆ ಎಂದರು.

ಸ್ಪರ್ಧೆಯಲ್ಲಿ ಎಲ್ಲರ ಬೆಂಬಲ ಅಗತ್ಯವಾಗಿದ್ದು, ಜಿಲ್ಲೆಯ ಎಲ್ಲ ವಯೋಮಾನದವರು ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಡಿ.10ರಿಂದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿರುವ ಫ್ಲೆಕ್ಸ್, ಬ್ಯಾನರ್ ಬಿಟ್ಟು ಬೇರೆ ಯಾವುದೇ ರೀತಿಯ ಬ್ಯಾನರ್‌ಗಳನ್ನು ಅಳವಡಿಸಬಾರದು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಡಿ.20, 21 ಮತ್ತು 22ರಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಳ ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಏರ್ಪಡಿಸಲು ಕನ್ನಡಕ್ಕಾಗಿ ಓಟ ಎಂಬ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್, ಕನ್ನಡಪರ ಸಂಘಟನೆ, ಲಯನ್ಸ್ ಕ್ಲಬ್ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಸ್ಪರ್ಧೆಗೆ ಮುಖ್ಯವಾಗಿ ಬೇಕಾದ ಸಿದ್ಧತೆಗಳನ್ನು ಇಂದಿನಿಂದಲೇ ಪ್ರಾರಂಭಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಓಟಕ್ಕೆ ಅಡಚಣೆಯಾಗದಂತೆ ಟ್ರಾಫಿಕ್ ಪೊಲೀಸರು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಓಟದ ಮಾರ್ಗದಲ್ಲಿ ಪ್ರತಿ 500 ಮೀಟರ್‌ಗೆ ವೈದ್ಯರ ತಂಡ ಹಾಗೂ ಕುಡಿಯುವ ನೀರಿನ ಸೌಲಭ್ಯವಿರಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್, ಪೌರಾಯುಕ್ತೆ ಪಂಪಾಶ್ರೀ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net