ಯುವ ಜನೋತ್ಸವ ಪ್ರಯುಕ್ತ ಮ್ಯಾರಥಾನ್‌ಗೆ ಚಾಲನೆ

merathan
Published on

ಮಡಿಕೇರಿ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ ರೋಟರಿ ವುಡ್ಸ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಮ್ಯಾರಾಥಾನ್ ಸ್ಪರ್ಧೆ(೫ ಕಿ.ಮೀ) ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಚಾಲನೆ ದೊರೆಯಿತು.


ಮ್ಯಾರಾಥಾನ್ ಸ್ಪರ್ಧೆಯನ್ನು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಉದ್ಘಾಟಿಸಿ ಮಾತನಾಡಿ, ಪ್ರಸಕ್ತ(೨೦೨೩-೨೪) ಸಾಲಿನ ಯುವಜನೋತ್ಸವ-ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ ವತಿಯಿಂದ ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಾಥಾನ್ ಸ್ಪರ್ಧೆ ಏರ್ಪಡಿಸಲಾಗಿದೆ. ಎಚ್‌ಐವಿ/ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯ ತಡೆಗಟ್ಟುವುದು. ಮತ್ತಿತರ ಕುರಿತು ಅರಿವು ಮೂಡಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.


ಮ್ಯಾರಾಥಾನ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ೧೭ ರಿಂದ ೨೫ ವರ್ಷದ ಒಟ್ಟು ೭೧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮ್ಯಾರಾಥಾನ್ ಸ್ಪರ್ಧೆಯು ಬುಧವಾರ ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮಾನ್ಸ್ ಕಾಂಪೌಂಡ್, ಮಡಿಕೇರಿಯಿಂದ ಪ್ರಾರಂಭವಾಗಿ, ನಗರದ ಪ್ರಮುಖ ಬೀದಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಮುಖಾಂತರ ಹಾದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ತಲುಪಿತು. ಮ್ಯಾರಾಥಾನ್ ಸಂಚರಿಸುವ ಮಾರ್ಗದಲ್ಲಿ, ಆಟೋ ಪ್ರಚಾರದ ಮುಖಾಂತರ ಎಚ್.ಐ.ವಿ/ಎಡ್ಸ್ ಬಗ್ಗೆ ಅರಿವು ಮೂಡಿಸಲಾಯಿತು.


ಮ್ಯಾರಥಾನ್ ಸ್ಪರ್ಧೆ ಬಾಲಕರ ವಿಭಾಗ: ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್.ಗೌತಮ್(ಪ್ರ), ಸೋಮವಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಬಿಟಿಸಿಜಿ ಕಾಲೇಜಿನ ಗಗನ್ ವೈ.ಪಿ(ದ್ವಿ), ಗೋಣಿಕೊಪ್ಪ ಕಾವೇರಿ ಕಾಲೇಜಿನ ಪಿ.ಸಿ.ಗೌತಮ್(ತೃ), ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿ.ಯು.ತಾಜುದ್ದೀನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬಿಎಸ್ಸಿ ನರ್ಸಿಂಗ್‌ನ ಕಿರಣ್ ಮಾಡರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎಂಬಿಬಿಎಸ್ ವಿದ್ಯಾರ್ಥಿ ಸಿದ್ದಾಪ್ರಭು ಹಾಗೂ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿ.ಜಿ.ಶರಣು ಸಮಾಧಾನಕರ ಬಹುಮಾನ ಪಡೆದಿದ್ದಾರೆ.


ಬಾಲಕಿಯರ ವಿಭಾಗದಲ್ಲಿ ಪೊನ್ನಂಪೇಟೆ ಕೂರ್ಗ್ ಇನ್ಸ್‌ಟ್ಯೂಟ್ ಆಪ್ ಟೆಕ್ನಾಲಜಿಯ ಕೆ.ಟಿ.ಚೋಂದಮ್ಮ(ಪ್ರ), ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ತ್ರಿಶಾ(ದ್ವಿ), ಮಡಿಕೇರಿ ಎಫ್‌ಎಂಕೆಎಂಸಿ ಕೆ.ಆರ್.ಭೂಮಿಕಾ(ತೃ), ಹಾಗೂ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್.ಭವಾನಿ, ವಿರಾಜಪೇಟೆ ಕಾವೇರಿ ಕಾಲೇಜಿನ ಸಿ.ಸಿ.ದೇಚಮ್ಮ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ಯಾರಾ ಮೆಡಿಕಲ್‌ನ ಮೇಘನಾ ಮುತ್ತಮ್ಮರವರು ಸಮಾದಾನಕರ ಬಹುಮಾನ ಪಡೆದಿದ್ದಾರೆ.


ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಎಸ್.ಗೌತಮ್ ಮತ್ತು ಕೆ.ಟಿ.ಚೋಂದಮ್ಮರವರು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿಜೇತರು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.


ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್, ಮಡಿಕೇರಿ ರೋಟರಿ ವುಡ್ಸ್‌ನ ಅಧ್ಯಕ್ಷ ವಸಂತ್ ಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರವೀಂದ್ರ ರೈ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾದ ಅಂಥೋನಿ ಡಿಸೋಜ, ಮಹಾಬಲ, ಬಿಂದ್ಯಾ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net