

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದ ಗಡಿ ನುಗ್ಗಿದ್ದ ಪಾಕಿಸ್ತಾನ ಸೈನಿಕರನ್ನು ಹೊಡೆದೋಡಿಸಿದ ಭಾರತೀಯ ಸೈನಿಕರ ಶ್ರಮ ಹಾಗೂ ಬಲಿದಾನವನ್ನು ಜುಲೈ 26ರಂದು ಸ್ಮರಿಸಲಾಗುತ್ತದೆ. 1999ರಲ್ಲಿ ಕಾರ್ಗಿಲ್ ಯುದ್ಧ ಗೆದ್ದ ಪ್ರಯುಕ್ತ ದೇಶಾದ್ಯಂತ `ಆಪರೇಶನ್ ವಿಜಯ್' ಹೆಸರಿನಲ್ಲಿ ಸಂಭ್ರಮಿಸಲಾಗುತ್ತದೆ. ಭಾರತೀಯ ಸೈನ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಈ ದಿನವನ್ನು ಸ್ಮರಣೀಯವಾಗಿ ಆಚರಿಸುವ ಉದ್ದೇಶದಿಂದ ನಗರದ `ಮೈ ದೇಶ್ ಫೌಂಡೇಶನ್'ನಿ0ದ ರನ್ ಫಾರ್ ಸೋಲ್ಜರ್ಸ್ ಆಯೋಜಿಸಲಾಗಿದೆ.
ಆ. 3ರಂದು ಬೆಳಗ್ಗೆ 7ಕ್ಕೆ ಇಲ್ಲಿನ ಕರ್ನಾಟಕ ಕಾಲೇಜು ವೃತ್ತದಿಂದ ಓಟಕ್ಕೆ ಗಣ್ಯರು ಚಾಲನೆ ನೀಡಲಿದ್ದಾರೆ. ಅಲ್ಲಿಂದ ಜ್ಯುಬಿಲಿ ವೃತ್ತ, ಕೋರ್ಟ್ ವೃತ್ತ, ಕೇಂದ್ರ ಗ್ರಂಥಾಲಯ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದವರೆಗೆ ಸಾಗಲಿದೆ.
* ವಿಜಯವಾಣಿ ಸಹಯೋಗ:
ಯುವಜನತೆಯಲ್ಲಿ ದೇಶಸೇವೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ರನ್ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗವಿದೆ. ಜತೆಗೆ ನ್ಯೂಜೆನ್ ಹೋಮ್ಸ್, ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗ್ರಾಮವಿಕಾಸ ಸಂಸ್ಥೆ, ಸರ್ವೋದಯ ವಿಮೆನ್ಸ್ ಹೆಲ್ತ್ ಸೆಂಟರ್, ಆಶಾಕಿರಣ ಫೌಂಡೇಷನ್, ಇತರರು ಸಹಯೋಗ ನೀಡಿದ್ದಾರೆ.
* ಯೋಧರ ಸಮಾಗಮ:
ಭಾರತೀಯ ಸೈನಿಕರು ಹಾಗೂ ಕಾರ್ಗಿಲ್ ಯುದ್ಧದಲ್ಲಿ ಪ್ರಾಣಾರ್ಪಣೆಗೈದ ಯೋಧರಿಗೆ ಈ ಕಾರ್ಯಕ್ರಮ ಅರ್ಪಿತ. ಕಾರ್ಗಿಲ್ ಯೋಧರು ಮತ್ತು ಅವರ ಅವಲಂಬಿತರು, ಮಾಜಿ ಹಾಗೂ ಹಾಲಿ ಸೈನಿಕರು, ಹಿರಿಯ ನಾಗರಿಕರು, ಶಾಲೆ- ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.