

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿಜೆಪಿ ಮಹಿಳಾ ಘಟಕದಿಂದ ರನ್ ಫಾರ್ ಮೋದಿ, ರನ್ ಫಾರ್ ನೇಷನ್ ವಾಕಥಾನ್ ನಡೆಸಲಾಯಿತು. ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ಮೈದಾನದವರೆಗೆ ನಡೆದ ವಾಕಥಾನ್‌ಗೆ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜೆಸಿಂತಾ ಅನಿಲ್ ಚಾಲನೆ ನೀಡಿದರು.
ತಾಲೂಕು ಕಚೇರಿಯಿಂದ ಆರಂಭಗೊಂಡ ವಾಕಥಾನ್, ಹನುಮಂತಪ್ಪ ಸರ್ಕಲ್, ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತವನ್ನು ತಲುಪಿ ಸಮಾಪನಗೊಂಡಿತ್ತು. ಕಾಲ್ನಡಿಗೆ ಜಾಥದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜೆಸಿಂತಾ ಅನಿಲ್, ರಾಜ್ಯ ಮಹಿಳಾ ಮೋರ್ಚಾ ಸೂಚನೆಯಂತೆ ಮೋದಿ ಅವರ ಕೈ ಬಲಪಡಿಸುವ ಉದ್ದೇಶದಿಂದ ವಾಕಥಾನ್ ನಡೆಸಲಾಗುತ್ತಿದೆ. ಇದಲ್ಲದೆ ಇನ್ನೆರಡು ದಿನವೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೋದಿ ಅವರ ಬಗ್ಗೆ ಜನರಿಗೆ ತಿಳಿಸಿಕೊಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಹೀಗಾಗಿ ದೇಶಕ್ಕೆ ಮೋದಿ ಅನಿವಾರ್ಯವಾಗಿದ್ದಾರೆ. ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾದಾಗ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ. ಹೀಗಾಗಿ ಎಲ್ಲ ಕ್ಷೇತ್ರಗಳಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದಾಗ ಮಾತ್ರ ಮೋದಿ ಅವರ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ಪ್ರಮುಖರಾದ ಚೈತ್ರಾ, ಸಚಿನ್ ಮತ್ತಿತರರಿದ್ದರು.