

ಬೆಂಗಳೂರು: ಭಾನುವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ರನ್ ಅಡಿಕ್ಟೃ್ ರಾಜರಾಜೇಶ್ವರಿ ನಗರ ಸಂಸ್ಥೆಯು ತನ್ನ ಆರನೇ ವಾರ್ಷಿಕ ಓಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 10 ಕಿಮೀ, 5 ಕಿಮೀ, 3 ಕಿಮೀ ವಿಭಾಗದಲ್ಲಿ ಓಟ ನಡೆಯಲಿದ್ದು ಸುಮಾರು 3500ಕ್ಕೂ ಹೆಚ್ಚು ಸಾರ್ವಜನಿಕರು ಮತ್ತು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪ್ರತಿ ವರ್ಷ ಹಸಿರು ಸ್ನೇಹಿಯಾಗಿ ವಾರ್ಷಿಕ ಓಟ ಕಾರ್ಯಕ್ರಮವನ್ನು ಆಯೋಜಿಸುವ ಸಂಸ್ಥೆಯು ಪ್ಲಾಸ್ಟಿಕ್ ಮತ್ತಿತರ ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಬಳಸದೆ ಇಷ್ಟು ದೊಡ್ಡ ಪ್ರಮಾಣದ ಕಾರ್ಯಕ್ರಮ ನಡೆಸುವುದು ವಿಶೇಷ.
ರನ್ ಅಡಿಕ್ಟೃ್ ಸ್ವಯಂಸೇವಕರಿಂದ ಮುನ್ನಡೆಯುತ್ತಿರುವ ಲಾಭ ರಹಿತ ಸಂಸ್ಥೆಯಾಗಿದ್ದು, ಸಮಾಜದ ಎಲ್ಲಾ ಕ್ಷೇತ್ರಗಳ ಪರಿಣತರು ಸ್ವಯಂ ಪ್ರೇರಣೆಯಿಂದ ಈ ಓಟ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ್ದಾರೆ.
ಸಂಸ್ಥೆ ವತಿಯಿಂದ ಇದುವರೆಗೆ ಗ್ರಾಮೀಣ ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದುವರೆ ಲಕ್ಷ ನೋಟ್ ಪುಸ್ತಕ, 700 ಕ್ಕೂ ಹೆಚ್ಚು ಡೆಸ್ಕ್, ಆಟೋಟ ಸಾಮಗ್ರಿಗಳನ್ನು ಉಚಿತವಾಗಿ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡಿದೆ. ಓಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ದೂ: 9886673223. ನೋಂದಣಿಗಾಗಿ runaddicts.in/events ಸಂಪರ್ಕಿಸಿ.