

ನರೇಗಲ್ಲ: ಪ್ರತಿ ತಿಂಗಳು ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ 3 ಸಾವಿರ ರೂ. ಬರಲಿದ್ದು ಅದಕ್ಕಾಗಿ ಇ-ಶ್ರಮ್ ಕಾರ್ಡ್ ಮಾಡಿಸಬೇಕು ಎಂಬ ವದಂತಿ ಪಟ್ಟಣ ಸೇರದಿಂತೆ ಸುತ್ತಲಿನ ಗ್ರಾಮಗಳಲ್ಲಿ ಹರಡಿದ್ದು, ಮಹಿಳೆಯರು ನಾ ಮುಂದು ತಾ ಮುಂದು ಎಂದು ಇ-ಶ್ರಮ್ ಕಾರ್ಡ್ ಮಾಡಿಸಲು ಸೇವಾ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ.
ಏನಿದು ಇ-ಶ್ರಮ್?: ಅಸಂಘಟಿತ ವಲಯಲ್ಲಿ ತೊಡಗಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಭಾರತ ಸರ್ಕಾರ ಇ-ಶ್ರಮ್ ಯೋಜನೆ ಪ್ರಾರಂಭಿಸಿದೆ. ಎಲ್ಲ ಅಸಂಘಟಿತ ಕಾರ್ಮಿಕರ ಡೇಟಾವನ್ನು ಸಂಗ್ರಹಿಸಲು ಮತ್ತು ಅವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಒದಗಿಸಲು ಸರ್ಕಾರವು ಇ-ಶ್ರಮ್ ಪೋರ್ಟಲ್ ಪ್ರಾರಂಭಿಸಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಇ-ಶ್ರಮ್ ಪಡೆಯಬಹುದು. ಅದರ ಮೂಲಕ ಅವರು ಮರಣ ವಿಮೆ, 60 ವರ್ಷಗಳ ನಂತರ ಪಿಂಚಣಿ ಮತ್ತು ಅಸಮರ್ಥತೆಯ ಸಂದರ್ಭದಲ್ಲಿ ಇತರೆ ರೀತಿಯ ಆರ್ಥಿಕ ಸಹಾಯದಂತಹ ಪ್ರಯೋಜನಗಳನ್ನು ಪಡೆಯಬಹುದು. ಆದರೆ, ಇ-ಶ್ರಮ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇದನ್ನೇ ಮೋದಿ ಸರ್ಕಾರ ಪ್ರತಿ ತಿಂಗಳು ಮೂರು ಸಾವಿರ ರೂ. ಜಮೆ ಮಾಡಲಿದೆ ಎಂಬ ವದಂತಿ ಹಬ್ಬಿದೆ. ಅದರ ಪರಿಣಾಮ ನೆಟ್ ಸೆಂಟರ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇ-ಶ್ರಮ್ ಕಾರ್ಡ್ ಮಾಡಿಸಲು ಮುಂದಾಗಿದ್ದಾರೆ. ಈ ರೀತಿಯ ಯಾವ ಯೋಜನೆಯೂ ಇಲ್ಲ ಎಂದರಿತು ವಾಪಸ್ ಹೋಗುತ್ತಿದ್ದಾರೆ.
ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ: ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ ಎನ್ನುವ ಹೆಸರಿನಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದ್ದು ಈ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಜನರು ವೃಥಾ ಕಂಪ್ಯೂಟರ್ ಸೆಂಟರ್‌ಗಳಿಗೆ ಅಲೆದಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರವ ನಕಲಿ ಕನ್ಯಾ ಆಶೀರ್ವಾದ ಯೋಜನೆ ಪ್ರಕಾರ ‘ಕೇಂದ್ರ ಸರ್ಕಾರ ನಿಮ್ಮ ಮನೆಯಲ್ಲಿನ ಹೆಣ್ಣುಮಕ್ಕಳಿಗೆ ಮಾಸಿಕ 2000 ರೂಪಾಯಿ ನೀಡುತ್ತಿದ್ದು ನೇರವಾಗಿ ನಿಮ್ಮ ಖಾತೆಗೆ ಬರುತ್ತದೆ. ಯೋಜನೆಯ ಲಾಭ ಪಡೆಯಲು ಬಾಲಕಿಯು 5 ರಿಂದ 18 ವರ್ಷದೊಳಗಿರಬೇಕು ಈ ಯೋಜನೆಯ ಲಾಭ ಪಡೆಯಲು ಸಿಎಸ್‌ಸಿಗೆ ಹೋಗಿ ಅರ್ಜಿ ಸಲ್ಲಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮಗುವಿನ ಭಾವಚಿತ್ರ 2, ತಂದೆ-ತಾಯಿಯ ವಾರ್ಷಿಕ ಆದಾಯ 2 ಲಕ್ಷರೂ. ದಾಟಿರಬಾರದು ಎನ್ನುವ ಮಾಹಿತಿಯನ್ನು ಒಳಗೊಂಡಿದೆ. ಇದನ್ನು ನಂಬಿದ ಅದೆಷ್ಟೋ ಜನ ಸಿಎಸ್‌ಸಿ ಸೆಂಟರ್‌ಗಳಿಗೆ ಅಲೆದಾಡುತ್ತಿದ್ದಾರೆ.
ಪಿಎಂ ಕನ್ಯಾ ಯೋಜನೆ ಎಂಬ ಯಾವುದೇ ಯೋಜನೆ ಸರ್ಕಾರ ಜಾರಿಗೆ ತಂದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ.ವಿರುಪಾಕ್ಷಯ್ಯ ಹಿರೇಮಠ, ಸಿಡಿಪಿಒ ರೋಣ