

ಮೂಲ್ಕಿ: ಕಾರ್ನಾಡು ಶಾಲೆಗೆ ಬರುತ್ತಿದ್ದ ನಾಲ್ಕನೇ ತರಗತಿ ಬಾಲಕ ನಾಪತ್ತೆಯಾಗಿ ಶಾಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಬಳಿಕ ಪೊಲೀಸ್ ತನಿಖೆಯಿಂದ ಮಗುವಿನ ತಂದೆಯ ಮಿತ್ರನ ಮನೆಯಲ್ಲಿ ಮಗು ಪತ್ತೆಯಾಗಿದೆ.
ಹೆಜಮಾಡಿಯಿಂದ ಕಾರ್ನಾಡ್ ಶಾಲೆಗೆ ಬಾಲಕ ಬಸ್‌ನಲ್ಲಿ ಬರುತ್ತಿದ್ದು, ಶುಕ್ರವಾರ ಬಂದಿರಲಿಲ್ಲ. ಬೆಳಗ್ಗೆ ಬಾಲಕನ ತಂದೆ ಹರೀಶ್ ಯಾನೆ ಹರಿಪ್ರಸಾದ್ ಶಾಲೆಗೆ ಬಂದು ‘ಮಗು ಎಲ್ಲಿ?’ ಎಂದು ಪ್ರಶ್ನಿಸಿದ್ದಾನೆ. ಶಿಕ್ಷಕರು ‘ಆತ ಶಾಲೆಗೆ ಬಂದಿಲ್ಲ’ ಎಂದು ತಿಳಿಸಿದಾಗ ‘ಬೆಳಗ್ಗೆ ನಾನೇ ಶಾಲೆಗೆ ಕಳುಹಿಸಿದ್ದೇನೆ’ ಎಂದು ವಾದಿಸಿ ರಂಪಾಟ ನಡೆಸಿ ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾನೆ. ಇದರಿಂದ ಶಾಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಇತ್ತ ಮಗು ನಾಪತ್ತೆಯಾದ ಬಗ್ಗೆ ಕಾರ್ನಾಡು ಪೇಟೆಯಲ್ಲಿ ಸುದ್ದಿ ಹಬ್ಬಿ ಮಗುವಿನ ಅಪಹರಣದ ಬಗ್ಗೆ ವದಂತಿ ಸೃಷ್ಟಿಯಾಗಿತ್ತು. ಕೂಡಲೇ ಮೂಲ್ಕಿ ನಪಂ ಸದಸ್ಯ ಪುತ್ತುಭಾವ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಾಲೆ ಪಕ್ಕದ ಕಟ್ಟಡದಲ್ಲಿರುವ ಅಂಗಡಿಯೊಂದರ ಸಿಸಿ ಕ್ಯಾಮರಾ ಫೂಟೇಜ್ ಪರಿಶೀಲಿಸಿದರು. ಅದರಲ್ಲಿ ಶಾಲೆ ಮುಂಭಾಗದ ಬಸ್‌ಸ್ಟಾೃಂಡ್‌ನಲ್ಲಿ ಬಾಲಕ ಬಸ್‌ನಿಂದ ಇಳಿದು ಶಾಲೆಯ ಕಡೆ ಬರುತ್ತಿರುವುದು ಹಾಗೂ ಅಲ್ಲಿಗೆ ಆಟೋದಲ್ಲಿ ಬಂದ ಮಗುವಿನ ತಂದೆ ಹರೀಶ್ ಆತನನ್ನು ಆಟೋದಲ್ಲಿ ಕುಳ್ಳಿರಿಸಿ ಹೋಗುತ್ತಿದ್ದ ದೃಶ್ಯ ಸೆರೆಯಾಗಿತ್ತು. ಕೂಡಲೇ ಸ್ಥಳಕ್ಕೆ ಹರೀಶ್‌ನನ್ನು ಕರೆಸಿದ ಪೊಲೀಸರು ‘ಮಗು ಎಲ್ಲಿ?’ ಎಂದು ಪ್ರಶ್ನಿಸಿದರೂ ಆತ ಬಾಯಿ ಬಿಡಲಿಲ್ಲ. ಅಲ್ಲಿಂದ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ, ‘ಮಗುವಿಗೆ ಅನಾರೋಗ್ಯ ಉಂಟಾಗಿದ್ದು, ಕೆರೆಕಾಡುವಿನ ತನ್ನ ಮಿತ್ರನ ಮನೆಯಲ್ಲಿ ಮಗುವನ್ನು ಇರಿಸಿದ್ದೇನೆ’ ಎಂದು ಬಾಯಿ ಬಿಟ್ಟಿದ್ದಾನೆ.
ಮಗುವಿನ ತಾಯಿಯ ಮನವಿ ಮೇರೆಗೆ ಪ್ರಕರಣ ದಾಖಲಾಗಿಲ್ಲ. ಆದರೆ ಆದರೆ ಮಗುವಿನ ತಂದೆ ಹರೀಶ್ ಯಾಕಾಗಿ ಈ ರೀತಿ ನಾಟಕ ಮಾಡಿ ಆತಂಕಕ್ಕೀಡು ಮಾಡಿದ್ದಾನೆ ಎಂಬುದು ಪ್ರಶ್ನೆಯಾಗಿದೆ.