

ರೋಣ: ಪಟ್ಟಣದ ಮುಗಳಿ ರಸ್ತೆಯ ಕಾಳಿಕಾ ದೇವಸ್ಥಾನದ ಹತ್ತಿರದ ಜಮೀನುಗಳಲ್ಲಿ ಚಿರತೆಯೊಂದು ಓಡಾಡಿದ ವದಂತಿ ಹಬ್ಬಿದ್ದು, ರೈತರನ್ನು ಆತಂಕಕ್ಕೆ ದೂಡಿದೆ.
ಮಂಗಳವಾರ ಬೆಳಗ್ಗೆ 8ಗಂಟೆಗೆ ಹೊಲದಲ್ಲಿನ ಕೆಲಸಕ್ಕೆ ತೆರಳುತ್ತಿದ್ದ ರೈತರು ಚಿರತೆಯನ್ನು ನೋಡಿದ್ದಾಗಿ ಹೇಳಿದ್ದು, ವಿಡಿಯೋ ಸಹ ಮಾಡಿದ್ದಾರೆ. ವಿಡಿಯೋದಲ್ಲಿ ಸ್ಪಷ್ಟವಾಗಿ ಚಿರತೆ ಕಂಡುಬಂದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿರತೆ ಬಂದಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿ ಅನ್ವರ ಕೋಲಾರ ಜಮೀನಿನಲ್ಲಿ ಚಿರತೆ ಓಡಾಡಿದ ಸ್ಥಳ ಪರಿಶೀಲನೆ ನಡೆಸಿದ್ದು ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸಿದ್ದಾರೆ.
‘ಸಿಬ್ಬಂದಿ ಜತೆ ಮುಗಳಿ ಗ್ರಾಮ ಸೇರಿ ಚಿರತೆ ಪ್ರತ್ಯಕ್ಷವಾದ ಹೊಲಗಳಲ್ಲಿ ಶೋಧ ಕಾರ್ಯವನ್ನು ನಡೆಸಿದ್ದು ಚಿರತೆಯೇ ಎಂಬ ಸ್ಪಷ್ಟತೆ ದೊರೆತಿಲ್ಲ. ಚಿರತೆಯನ್ನು ನೋಡಿರುವುದಾಗಿ ಜನ ಸಹ ಸ್ಪಷ್ಟವಾಗಿ ಹೇಳಿಲ್ಲ. ಬೇರೆ ಯಾರಿಗೂ ಚಿರತೆ ಕಂಡಿಲ್ಲ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ಪ್ರತ್ಯಕ್ಷವಾದ ಹೊಲದ ಪಕ್ಕದಲ್ಲಿಯೇ ಜನವಸತಿ ಪ್ರದೇಶಗಳು ಹಾಗೂ ಶಾಲೆ ಸೇರಿ ಕೈಗಾರಿಕೆಗಳು ಇರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.