

ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ !
ಕಳೆದ ಹದಿನೈದು ದಿನಗಳ ಹಿಂದೆ ಸಿಂದಗಿ ಬೈಪಾಸ್ ಬಳಿಯ ಮುನೇಶ್ವರಬಾಗ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಬಳಿಕ ಆಕಳು ಕರುವೊಂದನ್ನು ಸಾಯಿಸಿತ್ತು. ಚಿರತೆಯ ಚಲವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಬಳಿಕ ಇದೀಗ ನಗರದ ಹೃದಯಭಾಗದಲ್ಲಿಯೇ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿ ಮತ್ತಷ್ಟು ಆತಂಕ ಸೃಷ್ಠಿಸಿದೆ.
ಅರೆಕಿಲ್ಲಾ ಬಳಿಯ ದರಬಾರ್ ಗಲ್ಲಿಯಲ್ಲಿ ಶನಿವಾರ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ ಎಂದು ಮಹಿಳೆಯೊಬ್ಬಳು ಅಬ್ಬರಿಸುತ್ತಿದ್ದಂತೆ ಸುತ್ತಲಿನ ಜನ ದೌಢಾಯಿಸಿದ್ದಾರೆ. ಜನ ದಾಂಗುಡಿಯಿಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು. ಬಹಳ ಹೊತ್ತಿನವರೆಗೆ ಪರಿಶೀಲಿಸಿದರಾದರೂ ಚಿರತೆ ಮಾತ್ರ ಕಾಣಿಸಿಕೊಂಡಿಲ್ಲ. ಮಹಿಳೆಯನ್ನು ಹೊರತುಪಡಿಸಿ ಬೇರೆ ಯಾರಿಗೂ ಚಿರತೆ ಕಾಣಿಸಿಕೊಂಡಿಲ್ಲ. ಬಳಿಕ ಅಧಿಕಾರಿಗಳು ಸಿಸಿಟಿವಿ ಪರಿಶೀಲಿಸಿದ್ದು ಚಿರತೆಯ ಚಲನವಲನಗಳು ಸೆರೆಯಾಗಿಲ್ಲ. ಅದಾಗ್ಯೂ ಅರಣ್ಯಾಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.
ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕೆ. ಶಿವಶರಣಯ್ಯ ಅವರು, ‘ಚಿರತೆ ಇದೆ ಎಂಬ ಮಾಹಿತಿ ಆಧರಿಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಎಲ್ಲೂ ಚಿರತೆ ಕಂಡು ಬಂದಿಲ್ಲ. ಹೆಜ್ಜೆ ಗುರುತಾಗಲಿ ಸಿಸಿಟಿವಿ ದೃಶ್ಯಾವಳಿಯಾಗಲಿ ಪತ್ತೆಯಾಗಿಲ್ಲ. ಸ್ಥಳದಲ್ಲಿ ಸಿಬ್ಬಂದಿ ನೇಮಿಸಲಾಗಿದ್ದು, ರಾತ್ರಿಯೂ ಠಿಕಾಣಿ ಹೂಡಲಿದ್ದಾರೆ. ಹೀಗಾಗಿ ಜನ ಆತಂಕ ಪಡಬೇಕಿಲ್ಲ’ ಎಂದರು.