

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಬುಧವಾರ ನಡೆದಿದೆ ಎನ್ನಲಾದ ರೌಡಿಶೀಟರ್ ಎನ್‌ಕೌಂಟರ್ ಪ್ರಕರಣವನ್ನು ಜಿಲ್ಲಾ ಪೊಲೀಸರು ನಿರಾಕರಿಸಿದ್ದಾರೆ. ಇದ್ದಕ್ಕಿದ್ದಂತೆ ಬುಧವಾರ ಮಧ್ಯಾಹ್ನದ ವೇಳೆ ಪೊಲೀಸರ ಗುಂಡಿಗೆ ಕೊಲೆ ಆರೋಪಿ ಹತ್ಯೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹರಿದಾಡಿತ್ತು.
ಏನಿದು ಪ್ರಕರಣ?
ಕೆಲ ದಿನಗಳ ಹಿಂದೆ ದುಷ್ಕರ್ಮಿಗಳ ಗುಂಪು ನಗರದಲ್ಲಿ ಹೇಮಂತ್ ಎಂಬುವವನ್ನು ಹತ್ಯೆ ಮಾಡಿ ಪರಾರಿಯಾಗಿತ್ತು. ಪ್ರಕರಣ ಸಂಬಂಧ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದರು. ಬುಧವಾರ ಮುಂಜಾನೆ ನಗರದ ಹೊರವಲಯದಲ್ಲಿ ಆರೋಪಿ ಎನ್ನಲಾದ ನರಸಿಂಹಮೂರ್ತಿ ಎಂಬುವರ ಮೇಲೆ ಅತ್ಮರಕ್ಷಣೆಗೆ ಪೊಲೀಸರು ಗುಂಡು ಹಾರಿಸಿದ್ದರು. ಈ ವೇಳೆ ಆರೋಪಿ ಸಾವನ್ನಪ್ಪಿದ್ದ ಎಂಬ ವದಂತಿ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಅಲ್ಲಗೆಳೆದಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.