

ಹೂವಿನಹಡಗಲಿ: ಪಟ್ಟಣದ ವಾರದ ಸಂತೆ ಮಾರುಕಟ್ಟೆ ಹಿಂಭಾಗದ ಗುಜರಿ ಅಂಗಡಿಯ ಗೋದಾಮು ಮತ್ತು ಪ್ಲಾಸ್ಟಿಕ್ ಕಾರ್ಖಾನೆಗೆ ಶನಿವಾರ ಬೆಂಕಿ ತಗುಲಿ ವಸ್ತುಗಳು ಸುಟ್ಟು ಕರಕಲಾಗಿವೆ.
ಗುಜರಿ ಅಂಗಡಿ ಪಕ್ಕದಲ್ಲಿದ್ದ ಟಯರ್ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಪುಡಿಮಾಡುವ ಕಾರ್ಖಾನೆಗೆ ಬೆಂಕಿ ಆವರಿಸಿದೆ. ಗಾಢವಾದ ಹೊಗೆ ಕಾಣಿಸಿಕೊಂಡು ಕಾರ್ಮಿಕರು ಹೊರಗೆ ಬಂದಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಖಾನೆಯ ಒಳಗಿದ್ದ ಮೂವರು ಕೆಲಸಗಾರರನ್ನು ರಕ್ಷಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಅಗ್ನಿ ಆವರಿಸಿದ್ದರಿಂದ ಕಾರ್ಖಾನೆಯ ಯಂತ್ರಗಳು ಹಾಗೂ ಕಚ್ಚಾವಸ್ತುಗಳು ಸುಟ್ಟಿವೆ. ಸುತ್ತಲಿನ ಪ್ಲಾಸ್ಟಿಕ್ ವಸ್ತುಗಳನ್ನು ತೆರವುಗೊಳಿಸಿ ಹೆಚ್ಚಿನ ಹಾನಿಯನ್ನು ತಪ್ಪಿಸಲು ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಹರಸಾಹಸ ಪಟ್ಟರು.