

ಚಿಕ್ಕಮಗಳೂರು: ಅಧ್ಯಕ್ಷರ ರಾಜೀನಾಮೆ ವಿಚಾರ ಅಧ್ಯಕ್ಷರು-ಸ್ವಪಕ್ಷದ ಸದಸ್ಯರ ನಡುವೆ ವಾಗ್ವಾದ, ಗದ್ದಲ, ಆಡಳಿತ ಪಕ್ಷದ ಸದಸ್ಯರ ಸಭಾತ್ಯಾಗದಂತಹ ಹೈಡ್ರಾಮಾಕ್ಕೆ ಬುಧವಾರ ನಡೆದ ಜಿಪಂ ಸರ್ವ ಸದಸ್ಯರ ಸಾಮಾನ್ಯ ಸಭೆ ಸಾಕ್ಷಿಯಾಯಿತು.
ಸಭೆ ಆರಂಭವಾದಾಗ ಅಧ್ಯಕ್ಷೆ ಸುಜಾತ ಕೃಷ್ಣಪ್ಪ 2020-21ನೇ ಸಾಲಿನ ಕ್ರಿಯಾಯೋಜನೆಗೆ ಅನುಮೋದನೆ ನೀಡಬೇಕೆಂದು ಕೋರಿದರು. ಈ ಸಂದರ್ಭ ಸದಸ್ಯ ಶೃಂಗೇರಿ ಶಿವಣ್ಣ ಮಾತನಾಡಿ ಅಧ್ಯಕ್ಷರ ವಿರುದ್ಧ ನೇರ ವಾಗ್ದಾಳಿ ಆರಂಭಿಸಿದರು. ಜಿಪಂ ಸರ್ವ ಸದಸ್ಯರ ಸಭೆ ನಡೆಸುವ ಮುನ್ನ ಪೂರ್ವಭಾವಿಯಾಗಿ ಸದಸ್ಯರ ಸಭೆ ಕರೆದು ಚರ್ಚಿಸುವುದು ಸಂಪ್ರದಾಯ. ಆದರೆ ಅಧ್ಯಕ್ಷರು ಆ ರೀತಿಯ ಸೌಹಾರ್ದ ವಾತಾವರಣ ಮೂಡಿಸಲು ಪ್ರಯತ್ನಿಸಿಲ್ಲ. ಅಧ್ಯಕ್ಷರ ಕಾರ್ಯವೈಖರಿಯಿಂದ ಈಗಾಗಲೇ ಎರಡು ಸಭೆ ಕೋರಂ ಇಲ್ಲದೆ ಮುಂದೂಡುವಂತಾಯಿತು. ಅವರು ತಮ್ಮ ರಾಜೀನಾಮೆ ವಿಚಾರದಲ್ಲಿ ಪತ್ರಿಕೆಗಳಿಗೆ ನೀಡಿರುವ ಹೇಳಿಕೆಗಳು ಮುಜುಗರ ಮತ್ತು ಬೇಸರ ತರಿಸಿವೆ. ಅಧ್ಯಕ್ಷರಿಗೆ ಬಿಜೆಪಿ ಅವಕಾಶ ಮಾಡಿಕೊಟ್ಟಿದೆ. ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ. ಈ ಸಭೆಯಲ್ಲಿ 8 ಮಂದಿ ಪರಿಶಿಷ್ಟ ಸದಸ್ಯರಿದ್ದು, ಪಕ್ಷ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಅಧ್ಯಕ್ಷರು ಮಾತ್ರ ಪಕ್ಷಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು.
ಅಧ್ಯಕ್ಷರ ವಿರುದ್ಧ ಆರೋಪ
ತಮ್ಮ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಐದಾರು ಬಾರಿ ಕರೆ ಮಾಡಿದ್ದರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಅಧ್ಯಕ್ಷರ ವಾಹನ ಚಾಲಕ ಅಧ್ಯಕ್ಷರಿಗಿಂತಲೂ ಮುಂದೆ ಹೋಗಿ ಶೃಂಗೇರಿಯಲ್ಲಿ ಪ್ರಾಚಾರ್ಯರೊಬ್ಬರನ್ನು ಬೆದರಿಸಿರುವ ನಿದರ್ಶನವಿದೆ. ಅವರಿಗೆ ಆ ಹಕ್ಕು ಯಾರು ಕೊಟ್ಟಿದ್ದಾರೆ ? ಇಂಥ ತುಂಬಾ ದೂರುಗಳು ಅಧ್ಯಕ್ಷರ ಮೇಲಿವೆ. ಇದರಿಂದ ಸಾರ್ವಜನಿಕರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ. ಈ ಜಿಪಂನಲ್ಲಿ ಇದುವರೆಗೆ ಕೋರಂ ಇಲ್ಲದ ಕಾರಣಕ್ಕೆ ಸಭೆ ಮುಂದೂಡಿದ್ದ ನಿದರ್ಶನವಿರಲಿಲ್ಲ. ಇದಕ್ಕೆಲ್ಲ ಆಡಳಿತ ವೈಫಲ್ಯವೇ ಕಾರಣವಾಗಿರುವುದರಿಂದ ಅಧ್ಯಕ್ಷರು ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಕಲ್ಪಿಸಬೇಕೆಂದು ಕೋರಿದರು. ಇದಕ್ಕೆ ಪ್ರತಿಯಾಡಿದ ಅಧ್ಯಕ್ಷರು ತಮ್ಮ ರಾಜೀನಾಮೆ ವಿಚಾರ ಪಕ್ಷದ ವ್ಯಾಪ್ತಿಯಲ್ಲಿರುವಂಥದ್ದು. ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುವುದಾಗಿ ಹೇಳಿದರು.
ಪಕ್ಷದ ವೇದಿಕೆಯಲ್ಲಿ ಚರ್ಚಿಸಿ
ಇದೇ ವೇಳೆ ಅಧ್ಯಕ್ಷರ ರಾಜೀನಾಮೆ ವಿಚಾರವನ್ನು ನಿಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆಗಿಟ್ಟುಕೊಳ್ಳಿ ಎಂದು ಕಾಂಗ್ರೆಸ್‍ನ ಕೆ.ಆರ್.ಪ್ರಭಾಕರ್ ಹೇಳಿದಾಗ ಗರಂ ಆದ ಬಿಜೆಪಿ ಸದಸ್ಯರಾದ ಹಿರಿಗಯ್ಯ, ಬಣಕಲ್ ಶಾಮಣ್ಣ, ಬೆಳವಾಡಿ ರವೀಂದ್ರ, ಕವಿತಾ ಲಿಂಗರಾಜು, ಮಹೇಶ್ ಒಡೆಯರ್, ಶೃಂಗೇರಿ ಶಿವಣ್ಣ ಇನ್ನಿತರರು ಅವರ ವಿರುದ್ಧ ತಿರುಗಿ ಬಿದ್ದರು. ಈ ಸಂದರ್ಭ ಪ್ರಭಾಕರ್, ಪಿ.ಆರ್.ಸದಾಶಿವ, ಶರತ್ ಕೃಷ್ಣಮೂರ್ತಿ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಆರಂಭವಾಯಿತು. ಉಭಯ ಕಡೆಯ ಸದಸ್ಯರು ಸದನದ ಬಾವಿಗಿಳಿದು ವಾದಿಸತೊಡಗಿದರು. ಆಡಳಿತ ಪಕ್ಷದ ಸದಸ್ಯರು ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದರೆ, ವಿರೋಧ ಪಕ್ಷ ಸದಸ್ಯರು ಸಭೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸತೊಡಗಿದರು.
ಬಿಜೆಪಿಯ ಕೆ.ಆರ್.ಆನಂದಪ್ಪ, ಬೆಳವಾಡಿ ರವೀಂದ್ರ ಮತ್ತು ಕಾಂಗ್ರೆಸ್‍ನ ಪಿ.ಆರ್.ಸದಾಶಿವ ಮತ್ತು ಶರತ್ ಕೃಷ್ಣಮೂರ್ತಿ ನಡುವೆ ವಾಗ್ವಾದ ನಡೆದು ಸಭೆಯಲ್ಲಿ ಗದ್ದಲ-ಗೊಂದಲದಿಂದ ಏನೂ ಕೇಳಿಸದಂತಾಯಿತು. ಈ ಹಂತದಲ್ಲಿ ಅಧ್ಯಕ್ಷರು ತಾವು ಅಧಿಕಾರಕ್ಕೆ ಬಂದಾಗಿನಿಂದ ಇಲ್ಲದ ಆರೋಪ ಈಗೇಕೆ ಎಂದು ಪ್ರಶ್ನಿಸಿದರಲ್ಲದೆ, ಈ ಸಭೆಯಲ್ಲಿ ರಾಜಕೀಯ ತರುವುದು ಬೇಡ. ಆಡಳಿತದ ಬಗ್ಗೆ ಮಾತ್ರ ಚರ್ಚಿಸಿ ಎಂದು ಕೋರಿದರು.
ಧಿಕ್ಕಾರ ಕೂಗಿ ಸಭಾತ್ಯಾಗ
ಈ ಹಂತದಲ್ಲಿ ಅಧ್ಯಕ್ಷೆ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಸದಸ್ಯರು ಪಕ್ಷಕ್ಕೆ ಬದ್ಧರಾಗಿರದ ನಿಮ್ಮ ಮೇಲೆ ವಿಶ್ವಾಸವಿಲ್ಲ ಎಂದು ಹೇಳುತ್ತಲೇ ಸಭಾತ್ಯಾಗ ಮಾಡಿದರು. ನೀವೇ ಕೂರಿಸಿದ ಅಧ್ಯಕ್ಷರಿಗೆ ನೀವೇ ಧಿಕ್ಕಾರ ಕೂಗುತ್ತೀರಿ ಎಂದು ಕಾಂಗ್ರೆಸ್‍ನ ಶರತ್ ಕೃಷ್ಣಮೂರ್ತಿ ಅಣಕವಾಡಿದಾಗ ಅವರು ನಮ್ಮ ಪಕ್ಷಕ್ಕೆ ಬೇಡ. ನಿಮ್ಮ ಪಕ್ಷಕ್ಕೆ ಕರೆದುಕೊಂಡು ಹೋಗಿ ಬೆಳವಾಡಿ ರವೀಂದ್ರ ಲೇವಡಿ ಮಾಡಿದರು.
ಮತ್ತೆ ಸಭೆ ಮುಂದುವರಿದಾಗ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮುಗಿಸಿದ ಕೂಡಲೇ ಶಾಸಕ ಬೆಳ್ಳಿ ಪ್ರಕಾಶ್ ಕೋರಂ ಇಲ್ಲದೆ ಸಭೆ ನಡೆಸಲು ಜಿಲ್ಲಾ ಪಂಚಾಯ್ತಿ ಅಧಿನಿಯಮದಲ್ಲಿ ಅವಕಾಶವಿಲ್ಲ ಎಂದು ಆಕ್ಷೇಪವೆತ್ತಿದಾಗ ಅಧ್ಯಕ್ಷರು 15 ನಿಮಿಷ ಸಭೆ ಮುಂದೂಡಿ ಬಳಿಕ ಸಭೆ ಸೇರಿದಾಗ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು.