

ಕೊಪ್ಪ: ತಾಲೂಕಿನಲ್ಲಿರುವ ಕೆರೆಗಳನ್ನು ಉಪಯೋಗ ಮಾಡುವುದಕ್ಕಿಂತ ಹಾಳುಬಿಟ್ಟ ಕೆರೆಗಳೇ ಹೆಚ್ಚಿವೆ. ಕೆರೆಗಳನ್ನು ಉಳ್ಳವರು ಒತ್ತುವರಿ ಮಾಡಿಕೊಂಡಿರುವುದು ಒಂದೆಡೆಯಾದರೆ ಹಲವು ಕೆರೆಗಳಿಗೆ ಸಾರ್ವಜನಿಕರು ತ್ಯಾಜ್ಯ ತುಂಬಿಸಿ ನೀರು ಬಳಕೆಗೆ ಬಾರದಂತೆ ಮಾಡಿದ್ದಾರೆ.
ಹೆಚ್ಚು ಮಳೆಯಾದರೂ ತಾಲೂಕು ನೀರಿನ ಅಭಾವದಿಂದ ಮುಕ್ತಿ ಪಡೆದಿಲ್ಲ. ಏಪ್ರಿಲ್, ಮೇನಲ್ಲಿ 22 ಗ್ರಾಪಂಗಳ ಕೆಲ ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ನೀರಿನ ಕೊರತೆ ಉಂಟಾಗಲು ಜಲಮೂಲಗಳ ಸರಿಯಾದ ನಿರ್ವಹಣೆ, ಸದ್ಬಳಕೆ ಮಾಡಿಕೊಳ್ಳದಿರುವುದೇ ಪ್ರಮುಖ ಕಾರಣ.
ಕೆರೆ, ಬಾವಿ, ಹೊಳೆಗಳು ಹಾಗೂ ತುಂಗಾ ನದಿ ತಾಲೂಕಿನ ಪ್ರಮುಖ ಜಲಮೂಲಗಳಾಗಿವೆ. ಜಿಪಂ ಇಂಜಿನಿಯರಿಂಗ್ ಇಲಾಖೆ ದಾಖಲೆ ಪ್ರಕಾರ ತಾಲೂಕಿನಲ್ಲಿ 468 ಕೆರೆಗಳು ಹಾಗೂ ತಾಪಂನಿಂದ 182 ಕೆರೆಗಳಿವೆ. ಜಿಪಂ ಕೆರೆಗಳ ಪ್ರಸ್ತುತ ಸ್ಥಿತಿ ಬಗ್ಗೆ ಇಲಾಖೆಯಲ್ಲಿ ಸರಿಯಾದ ಮಾಹಿತಿಯೇ ಇಲ್ಲ.
ತಾಪಂ ಅಧೀನದ ಕೆರೆಗಳಲ್ಲಿ ಗ್ರಾಪಂನ 14ನೇ ಹಣಕಾಸು ಯೋಜನೆ, ಎನ್ಆರ್ಐಜಿ ಹಾಗೂ ವಿವಿಧ ಯೋಜನೆಗಳಲ್ಲಿ ಕೆರೆಗಳ ದುರಸ್ತಿ, ಹೂಳೆತ್ತುವುದು ಮತ್ತಿತರ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.
ಬಹುತೇಕ ಕೆರೆಗಳು ತ್ಯಾಜ್ಯ ಹಾಕುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಸ್ಥಳೀಯ ಆಡಳಿತ ವರ್ಗದವರು ಇದನ್ನು ಕಂಡೂ ಕಾಣದಂತಿದ್ದಾರೆ. ಕೆರೆಗಳ ಅಭಿವೃದ್ಧಿ ಕಡೆ ಗಮನ ಹರಿಸುವುದಿರಲಿ, ಇರುವ ಕೆರೆಗಳನ್ನು ಕಾಪಾಡಲೂ ಅವರಿಂದಾಗುತ್ತಿಲ್ಲ. ಹಳ್ಳಿಗಳಲ್ಲಿ ಜಮೀನ್ದಾರರು, ಉಳ್ಳವರು ಕೆರೆಗಳನ್ನು ಒತ್ತುವರಿ ಮಾಡಿ ಅಡಕೆ, ಕಾಫಿ ಇನ್ನಿತರ ಬೆಳೆ ಬೆಳೆದಿದ್ದಾರೆ.
ಅಭಿವೃದ್ಧಿಯಾಗಲೇ ಇಲ್ಲ ಕೆಸವಿನ ಕೆರೆ: ಅದ್ದಡ ಗ್ರಾಮದ ಸರ್ವೆ ನಂ.11 ಹಾಗೂ 338ರಲ್ಲಿ 20 ಎಕರೆಯಲ್ಲಿ ಕೆಸವಿನ ಕೆರೆ ಇದೆ. ಮಾಜಿ ಶಿಕ್ಷಣ ಸಚಿವ ದಿ. ಗೋವಿಂದೇಗೌಡ ಅವರು ಈ ಕೆರೆ ಅಭಿವೃದ್ಧಿಗೊಳಿಸಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ವರ್ಷವಿಡೀ ನೀರೊದಗಿಸುವ ಕನಸು ಕಂಡಿದ್ದರು. ಆದರೆ ಇಂದಿಗೂ ಅದು ಕನಸಾಗೇ ಉಳಿದಿದೆ.
ಕೆರೆ ಜಾಗದ ವಿಷಯವಾಗಿ ಎಸ್.ಆರ್.ವೆಂಕಟೇಶ್ ಎಂಬುವರು ಹೈಕೋರ್ಟ್ನಲ್ಲಿ ಕೇಸ್ ಹಾಕಿದ್ದರು. ಹಲವು ವರ್ಷಗಳ ಕಾಲ ಕೋರ್ಟ್ನಲ್ಲಿ ವ್ಯಾಜ್ಯ ನಡೆಯಿತು. 2004ರಲ್ಲಿ ಹೈಕೋರ್ಟ್ ತೀರ್ಪು ನೀಡಿತು. 30 ಎಕರೆ ಕೆರೆಯಲ್ಲಿ 20 ಎಕರೆ ಜಾಗವನ್ನು ನೀರು ಸರಬರಾಜು ಯೋಜನೆಗೆ ಹಾಗೂ ಉಳಿದ 10 ಎಕರೆಯನ್ನು ಎಸ್.ಆರ್.ವೆಂಕಟೇಶ್ ಉಪಯೋಗಕ್ಕೆ ಬಿಟ್ಟುಕೊಡಬೇಕೆಂದು ತೀರ್ಪು ಬಂತು. ನಂತರ ಕೊಪ್ಪ ಗ್ರಾಮಾಂತರ ಗ್ರಾಪಂ ವ್ಯಾಪ್ತಿಯ ಕೆರೆಯನ್ನು ಪಪಂ ನೀರು ಸರಬರಾಜು ಯೋಜನೆಗೆ ನೀಡಲಾಯಿತು. ಆದರೆ ಇದುವರೆಗೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಕೆರೆಗಳಲ್ಲಿ ಗಿಡಗಂಟಿ ಬೆಳೆದಿದೆ. ಪಟ್ಟಣದ ಕೆಲ ವರ್ತಕರು ಕೆರೆಗೆ ತ್ಯಾಜ್ಯ ಸುರಿಯುತ್ತಿದ್ದಾರೆ.
2014ರಲ್ಲಿ ಕೆಸವಿನ ಕೆರೆ ಬಳಸಿಕೊಳ್ಳಲು ಪಪಂ ಮನಸ್ಸು ಮಾಡಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ಸಂಪರ್ಕ ಮಾಡಿ ರೂಪುರೇಷೆ ನೀಡುವಂತೆ ಮನವಿ ಮಾಡಿತ್ತು. 33.95 ಲಕ್ಷ ರೂ. ವೆಚ್ಚವಾಗಲಿದ್ದು, 10 ಲಕ್ಷ ರೂ.ಗಳನ್ನು ಮುಂಗಡವಾಗಿ ಪಾವತಿ ಮಾಡಿದರೆ ಕೆಲಸ ಪ್ರಾರಂಭಿಸುವುದಾಗಿ ಮಂಡಳಿ ತಿಳಿಸಿತ್ತು. ಆದರೆ ಅನುದಾನ ಕೊರತೆಯಿಂದ ಪಪಂ ಐದು ಲಕ್ಷ ರೂ.ಗಳನ್ನು ಮಂಡಳಿಗೆ ಕಟ್ಟಿ ಉಳಿದ ಹಣವನ್ನು ಇದುವರೆಗೂ ಕಟ್ಟಲು ಸಾಧ್ಯವಾಗದೆ ಕೈಚೆಲ್ಲಿ ಕೂತಿದೆ.
ಅನುದಾನ ವಾಪಸ್: ಕೆಸವಿನಕೆರೆ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಈ ಹಿಂದೆ ಎರಡು ಬಾರಿ ಸರ್ಕಾರದಿಂದ ಹಣ ಬಿಡುಗಡೆಗೊಳಿಸಿದ್ದೇವೆ. ಕೆಲವು ಕಾರಣದಿಂದ ಹಣ ವಾಪಸ್ ಹೋಗಿದೆ. ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿಗೊಳಿಸಿ ಪಟ್ಟಣಕ್ಕೆ ಶಾಶ್ವತ ನೀರಿನ ಯೋಜನೆ ಕಲ್ಪಿಸಲಾಗುತ್ತದೆ. ಕೆಲ ಗ್ರಾಮಗಳಲ್ಲಿ ಕೆರೆ ಒತ್ತುವರಿಯಾಗಿದೆ. ಸಾರ್ವಜನಿಕರು ತ್ಯಾಜ್ಯ ಹಾಕುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.