ತೆಂಕುತಿಟ್ಟು ಚಿಕ್ಕ ಮೇಳ ಪ್ರದರ್ಶನಕ್ಕೆ ನಿಯಮಾವಳಿ; ಕಲಾ ತಂಡಗಳ ಶಿಸ್ತು ನಿರ್ವಹಣೆ ವ್ಯವಸ್ಥೆಗೆ ಸಾಂಸ್ಥಿಕ ಸ್ವರೂಪ

chikka mela
ಸಾಂದರ್ಭಿಕ ಚಿತ್ರ
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಯಕ್ಷಗಾನದ ಪೂರ್ಣ ಪ್ರಮಾಣದ ವೇಷದೊಂದಿಗೆ ರಾತ್ರಿ ಹಿಂದು ಮನೆಗಳಿಗೆ ತೆರಳಿ ಕನಿಷ್ಠ ಸಮಯದಲ್ಲಿ ಪುರಾಣ ಅಥವಾ ಇತಿಹಾಸದ ಒಂದು ತುಣುಕನ್ನು ಆಧರಿಸಿ ಪ್ರದರ್ಶಿಸುವ ತೆಂಕು ತಿಟ್ಟಿನ ಚಿಕ್ಕ ಮೇಳಗಳಲ್ಲಿ ಶಿಸ್ತು ಮೂಡಿಸಲು ನಿಯಮಾವಳಿ ರೂಪಿಸಲಾಗಿದೆ.

ಸಮಿತಿ ಅಸ್ತಿತ್ವಕ್ಕೆ
ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಮೇಳಗಳು ತಿರುಗಾಟ ಸಂದರ್ಭ ಕೆಲವು ಅನಪೇಕ್ಷಿತ ಘಟನೆಗಳು ನಡೆದಿರುವ ಬಗ್ಗೆ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಚಿಕ್ಕ ಮೇಳಗಳ ನೈಜ ಕಲಾವಿದರು ಹಾಗೂ ಕಲಾಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಾವಳಿ ರೂಪಿಸಲಾಗಿದೆ ಎಂದು ನೂತನವಾಗಿ ತೆಂಕು ತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ದಕ ಜಿಲ್ಲೆ ಕೇಂದ್ರ ಸಮಿತಿ ರಚಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  • ನಿಯಮಾವಳಿ ಏನು?
    ಎಲ್ಲ ಚಿಕ್ಕ ಮೇಳಗಳು ಕೇಂದ್ರ ಸಮಿತಿಯಲ್ಲಿ ನೋಂದಣಿ ಮಾಡಿಕೊಂಡು ಪರವಾನಗಿ ಪಡೆದುಕೊಳ್ಳಬೇಕು. ಸಂಜೆ 6ಗಂಟೆಯಿಂದ ರಾತ್ರಿ 10.30 ಗಂಟೆ ತನಕ ಕನ್ನಡ ಮತ್ತು ತುಳುವಿನ ಯಾವುದಾದರೂ ಗರಿಷ್ಠ 20 ನಿಮಿಷ ಮೀರದ ಒಳ್ಳೆಯ ಸಂದೇಶ ಇರುವ ಸನ್ನಿವೇಶದ ಪ್ರದರ್ಶನ ಒದಗಿಸಬೇಕು ಸಹಿತ 16 ಅಂಶಗಳ ನಿಬಂಧನೆಗಳನ್ನು ನಿಯಮಾವಳಿಯಲ್ಲಿ ಪಟ್ಟಿ ಮಾಡಲಾಗಿದೆ. ಪ್ರತಿ ಮನೆಯವರು ಒಕ್ಕೂಟದ ಪರವಾನಿಗೆ ಇದ್ದವರಿಗೆ ಮಾತ್ರ ಅವಕಾಶ ನೀಡಬೇಕು. ವ್ಯವಸಾಯಿ ಕಲಾವಿದರ ಬದುಕಿಗೆ ನೆರವಾಗಬೇಕು ಎಂದು ಅವರು ವಿನಂತಿಸಿದರು.
    ಈಗಾಗಲೇ 45 ತಂಡಗಳು ಒಕ್ಕೂಟದಲ್ಲಿ ನೋಂದಣಿ ಮಾಡಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡಗು ತಿಟ್ಟು ಕಲಾವಿದರು ಚಿಕ್ಕಮೇಳ ತಿರುಗಾಟ ನಡೆಸಬಾರದು ಎನ್ನುವುದು ನಮ್ಮ ಮನವಿ. ಒಕ್ಕೂಟ ರಚನೆ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಅವರ ಗಮನಕ್ಕೆ ತರಲಾಗುವುದು. ಮಾಹಿತಿಗೆ ಒಕ್ಕೂಟದ ಕಚೇರಿ ಬಿಸಿರೋಡ್‌ನ ಶ್ರುತಿ ಆರ್ಟ್ಸ್ ಸಂಪರ್ಕಿಸಬಹುದು ಎಂದರು.
  • ದೂರು ಸಲ್ಲಿಸಲು ಅವಕಾಶ
    ಒಂದೇ ಊರಿನಲ್ಲಿ ಎರಡೆರಡು ತಂಡ ಮನೆಗೆ ಭೇಟಿ ನೀಡುವಂತಿಲ್ಲ. ಇನ್ನೊಂದು ತಂಡ ಆಗಮಿಸಿದರೆ ಅವಕಾಶ ಕೊಡಬಾರದು. ನಿಗದಿತ ಸಮಯ ರಾತ್ರಿ 10.30ಕ್ಕೆ ದಿನದ ತಿರುಗಾಟ ಮುಕ್ತಾಯಗೊಳ್ಳಬೇಕು. ತಂಡದಿಂದ ಅನಪೇಕ್ಷಿತ ಘಟನೆ ನಡೆದರೆ ಮನೆಯವರು ಒಕ್ಕೂಟಕ್ಕೆ ದೂರು ಸಲ್ಲಿಸಬಹುದು. ವ್ಯವಸಾಯ ಮಾಡುತ್ತಿರುವ ಕಲಾವಿದರ ತಂಡಕ್ಕೆ ಒಕ್ಕೂಟ ಪರವಾನಿಗೆ ನೀಡುತ್ತದೆ. ಚಿಕ್ಕ ಮೇಳಗಳ ತಿರುಗಾಟದಲ್ಲಿ ಸಂಗ್ರಹ ಆದ ಸಂಪಾದನೆಯ ಒಂದು ಭಾಗ ಚಿಕ್ಕಮೇಳದ ಕಲಾವಿದರ ಸಂಕಷ್ಟ ನಿಧಿಯಾಗಿ ಠೇವಣಿ ಇಡಲಾಗುವುದು ಎಂದು ಅವರು ವಿವರಿಸಿದರು.
    ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಉಪಾಧ್ಯಕ್ಷರಾದ ರಮೇಶ ಕುಲಶೇಖರ, ಮೋಹನ ಕಲಂಬಾಡಿ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಕಾರ್ಯದರ್ಶಿ ದಿವಾಕರ ದಾಸ್ ಶ್ರುತಿ ಆರ್ಟ್ಸ್, ಜತೆ ಕಾರ್ಯದರ್ಶಿ ಕಡಬ ದಿನೇಶ ರೈ ಉಪಸ್ಥಿತರಿದ್ದರು.
  • ***
  • ಯಕ್ಷ ವೇಷಭೂಷಣಗಳಿಗೆ ನಿರ್ಬಂಧ

ಹಿಂದು ಹಬ್ಬಗಳ ಸಂದರ್ಭ ಯಕ್ಷಗಾನ ವೇದಿಕೆಯ ಪ್ರದರ್ಶನ ಹೊರತುಪಡಿಸಿದ ಇತರ ಕಾರ್ಯಕ್ರಮಗಳಲ್ಲಿ ನವರಾತ್ರಿ, ದಸರಾ, ಗಣೇಶೋತ್ಸವ, ಅಷ್ಟಮಿ ಸಂದರ್ಭಗಳಲ್ಲಿ ಯಕ್ಷಗಾನದ ವೇಷಭೂಷಣ ಧಾರಣೆ ಮಾಡಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಆಗ್ರಹಿಸಿದ್ದಾರೆ.
ಉಲ್ಲಂಘನೆ ಮಾಡಿದರೆ ಸಾರ್ವಜನಿಕರು, ಕಲಾಭಿಮಾನಿಗಳು ಅಂತಹ ವೇಷಭೂಷಣಗಳನ್ನು ಧಾರಣೆ ಮಾಡಿದ ವೇಷಧಾರಿಗಳನ್ನು ತಡೆದು ನಿಲ್ಲಿಸಿ ಸ್ಥಳೀಯ ಆರಕ್ಷಕ ಠಾಣೆಗೆ ತಿಳಿಸಬೇಕೆಂದು ಆಗ್ರಹಿಸುತ್ತೇವೆ. ಅಲ್ಲದೇ, ಅವರಿಗೆ ಬಣ್ಣಹಚ್ಚಿ ವೇಷ ಭೂಷಣ ಬಾಡಿಗೆಗೆ ನೀಡುವವರು ಕೂಡಾ ಕಲೆಯ ಗೌರವ ಉಳಿಸುವುದಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net