

ಹಾವೇರಿ: ಸೋಮವಾರದಿಂದ ಜು. 19ರ ಬೆಳಗ್ಗೆ 6ರವರೆಗೆ ಕರೊನಾ ನಿಯಂತ್ರಣ ಮಾರ್ಗಸೂಚಿಯ ಕೆಲ ನಿಯಮಗಳನ್ನು ಸರ್ಕಾರ ಸಡಿಲಿಸಿದ್ದರಿಂದ ಸೋಮವಾರ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು.
ಕಳೆದ ಒಂದು ವಾರದಿಂದ ಸಂಜೆ 5ರ ನಂತರ ಲಾಕ್ಡೌನ್ ಜಾರಿ ಇದ್ದುದರಿಂದ ಸಂಜೆಯಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ, ಸೋಮವಾರ ಸಂಜೆ 5ರ ನಂತರವೂ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಸರ್ಕಾರಿ, ಖಾಸಗಿ ಕಚೇರಿಗಳು, ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು, ಮಾಲ್ಗಳಲ್ಲಿ ವ್ಯಾಪಾರ ಹೆಚ್ಚಾಗಿತ್ತು. ಕೆಲ ಅಂಗಡಿಗಳಲ್ಲಿ ಪರಸ್ಪರ ಅಂತರ ನಿಯಮ ಪಾಲನೆ ಕಂಡು ಬರಲಿಲ್ಲ. ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣ ಕಡಿಮೆ ಆಗಿದ್ದರಿಂದ ಜನರಲ್ಲಿ ಈಗ ಭಯವೂ ಕಡಿಮೆಯಾಗಿದೆ. ಹೀಗಾಗಿ ಕರೊನಾ ಮಾರ್ಗಸೂಚಿ ಅಷ್ಟೊಂದು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ರೂಟ್ಗಳಲ್ಲಿ ಬಸ್ ಸಂಚರಿಸಿದವು. ಬೇಡಿಕೆಗೆ ತಕ್ಕಂತೆ ಗ್ರಾಮೀಣ ಭಾಗಗಳಿಗೂ ಬಸ್ ಸಂಚರಿಸಿದವು. ದೇವಸ್ಥಾನಗಳು ತೆರೆದಿದ್ದರಿಂದ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.