

ಕನಕಗಿರಿ: ಪಟ್ಟಣದ ಎಪಿಎಂಸಿ ಕಾಂಪೌಂಡ್ ತೆರವು, ಮಳಿಗೆಗಳ ದುರ್ಬಳಕೆ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇತ್ತೀಚೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್ ಮೂಲಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಎಪಿಎಂಸಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕೆಲ ವರ್ತಕರು ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಮಳಿಗೆ ಬದಲಾಗಿ ನೆಲ ಮಹಡಿ ನಿರ್ಮಿಸಿಕೊಂಡಿದ್ದಾರೆ. ಇನ್ನೂ ಕೆಲವರು ನಿವೇಶನಕ್ಕಿಂತ ಹೆಚ್ಚುವರಿ ಜಾಗೆಯಲ್ಲಿ ಮಳಿಗೆ ನಿರ್ಮಿಸಿಕೊಂಡಿದ್ದಾರೆ.
ಎಪಿಎಂಸಿಗಿದ್ದ ಕಾಂಪೌಂಡ ತೆರವುಗೊಳಿಸಿ ಮಳಿಗೆಗಳನ್ನು ಅನ್ಯ ಉದ್ದೇಶಗಳಿಗೆ ಬಾಡಿಗೆ ನೀಡಿದ್ದಾರೆ. ಲೀಸ್ ಕಂ ಸೇಲ್ ರೂಪದಲ್ಲಿದ್ದ 30 ಚಿಕ್ಕ ಮಳಿಗೆಗಳ ಪೈಕಿ 29 ಮಳಿಗೆಗಳಲ್ಲಿ ಚಪ್ಪಲಿ, ಕಿರಾಣಿ, ಕಟಿಂಗ್, ವಾಚ್ ಸೆಂಟರ್, ಸೈಕಲ್ ಶಾಪ್, ಮೊಬೈಲ್ ಅಂಗಡಿ, ಬೈಕ್ ಸರ್ವಿಸ್ ಸೇರಿ ನಾನಾ ವ್ಯಾಪಾರಕ್ಕಾಗಿ ಬಳಕೆಯಾಗುತ್ತಿವೆ.
ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ವಾಸ್ತವ ಅರಿತರೂ ಕ್ರಮಕ್ಕೆ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಬೆಂಗಳೂರಿನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ತಿಳಿಸಿದರು.
ತಾಲೂಕು ಅಧ್ಯಕ್ಷ ಗಣೇಶರೆಡ್ಡಿ, ಪ್ರಮುಖರಾದ ಕೃಷ್ಣಪ್ಪ ಚಲವಾದಿ, ಸಣ್ಣ ಹನುಮನಗೌಡ, ಮರಿಯಪ್ಪ ಹುಗ್ಗಿ, ದುರುಗಪ್ಪ ತಿಪ್ಪನಾಳ, ಮರಿಯಪ್ಪ ಕನಕಾಪುರ, ಸಗರಪ್ಪ ಕಂಪ್ಲಿ, ತಿಪ್ಪಾರೆಡ್ಡಿ ಹುಲಿಹೈದರ, ಕೃಷ್ಣ ಕಾಕಿ, ವೀರೇಶ ಭಾವಿಕಟ್ಟಿ, ನಾಗೇಶ ಪೂಜಾರ, ಕನಕಪ್ಪ ಮಳಗಾವಿ ಇತರರಿದ್ದರು.