

ಲಿಂಗಸುಗೂರು: ಇಂದಿನ ವೇಗದ ಜಗತ್ತಿನಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅಪಘಾತ ನಿಯಂತ್ರಣಕ್ಕೆ ರಸ್ತೆ ಸುರಕ್ಷತೆ ನಿಯಮಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕೆಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ನಗರದ ಸಾರಿಗೆ ಸಂಸ್ಥೆ ಡಿಪೋದಲ್ಲಿ ರಸ್ತೆ ಸುರಕ್ಷತಾ ಹಾಗೂ ಅಪಘಾತ ನಿಯಂತ್ರಣ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ರಸ್ತೆ ಸುರಕ್ಷತೆ ನಿಯಮಗಳನ್ನು ಪ್ರತಿಯೊಬ್ಬರೂ ಅನುಸರಿಸಿದರೆ ಅಪಾಯಕಾರಿ ಸಂದರ್ಭಗಳನ್ನು ತಪ್ಪಿಸಬಹುದು. ನಿಗದಿತ ವೇಗದ ಮಿತಿಯಲ್ಲಿ ವಾಹನ ಚಾಲನೆ ಮಾಡುವುದು ಅಗತ್ಯವಾಗಿದೆ. ಮಧ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು ಎಂದು ಹೇಳಿದರು.