

ವಿಜಯಪುರ: ಮಾದಕ ವಸ್ತುವಿನ ದುರ್ಬಳಕೆ, ರ‌್ಯಾಗಿಂಗ್ ಮತ್ತು ಸೈಬರ್ ಅಪರಾಧಗಳ ಹಾನಿ ತಡೆಯುವಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಹತ್ತರ ಜವಾಬ್ದಾರಿ ವಹಿಸಬೇಕು. ಮಾದಕ ವ್ಯಸನದಿಂದ ಜೀವನವೇ ಹಾಳಾಗುತ್ತದೆ ಎಂದು ಗ್ರಾಮೀಣ ವೃತ್ತದ ಸಿಪಿಐ ರಮೇಶ ಅವಜಿ ಹೇಳಿದರು.
ನಗರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ವಿಜಯಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಪ್ರಯುಕ್ತ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿಬಿರಾರ್ಥಿಗಳಿಗೆ ಮಾದಕದ್ರವ್ಯ ಪದಾರ್ಥಗಳ ದುರ್ಬಳಕೆ ಮತ್ತು ಸೈಬರ್ ಅಪರಾಧ ಕಾನೂನು ವಿಷಯದ ಬಗ್ಗೆ ಚರ್ಚೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ತೆಗೆದುಕೊಂಡ ಕಾನೂನು ಕ್ರಮಗಳ ಕುರಿತು ತಮ್ಮ ಅನುಭವ, ಮಾದಕ ದ್ರವ್ಯಗಳ ದುರ್ಬಳಕೆ ಮತ್ತು ಅದರ ದುಷ್ಟಪರಿಣಾಮಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಭಾರತೀಯ ದಂಡ ಸಂಹಿತೆಯ ಬೇರೆ ಬೇರೆ ಸೆಕ್ಷನ್‌ಗಳು ಅನ್ವಯಿಸುವುದರ ಕುರಿತು ತಿಳಿಸಿದರು. ಅಲ್ಲದೆ, ಮಾದಕ ವಸ್ತುಗಳ ವ್ಯಸನದಿಂದ ವಿದ್ಯಾರ್ಥಿಗಳ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಆಗುವ ದುಷ್ಪಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ಗ್ರಾ.ಪಂ. ಅಧ್ಯಕ್ಷ ಶ್ರೀರಂಗ ಬರ್ತಡೇ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನಗಳ ವಿರುದ್ಧ ಹೋರಾಡುವ ಮನೋಧೈರ್ಯ ಹೊಂದಬೇಕು ಎಂದರು.
ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರದೀಪ ಕುಂಬಾರ ಮಾತನಾಡಿದರು. ಸೌಮ್ಯ ಕುಲಕರ್ಣಿ ಪ್ರಾರ್ಥಿಸಿದರು. ಪ್ರೀತಿ ಮೇತ್ರಿ ನಿರೂಪಿಸಿದರು. ವಾಸಂತಿ ವಂದಿಸಿದರು. ಶಶಾಂಕ್ ದೇಸಾಯಿ, ವಿವೇಕ ತಮ್ಮದಡ್ಡಿ ಮತ್ತಿತರರಿದ್ದರು.