

ಮಂಡ್ಯ: ನಾಗಮಂಗಲ ತಾಲೂಕಿನ ಅದ್ದಿಹಳ್ಳಿಯಲ್ಲಿರುವ ಎಪಿಎಂಸಿ ಮಾರುಕಟ್ಟೆ ಹೆಸರಿಗಷ್ಟೇ ಸೀಮಿತವಾಗಿದೆ. ಇದು ಉಪಯೋಗಕ್ಕೆ ಬಾರದಂತಾಗಿ ಪಾಳುಬಿದ್ದ ಪ್ರದೇಶವಾಗಿದೆ. ಪ್ರಾಂಗಣದ ತುಂಬಾ ಗಿಡಗಂಟಿಗಳು ಬೆಳೆದಿದ್ದು, ಇದು ಅಕ್ರಮ ಚಟುವಟಿಕೆಗಳ ತಾಣವಾಗಿರುವುದು ಶೋಚನೀಯ.
ಅದ್ದಿಹಳ್ಳಿ- ಬಿಂಡಿಗನವಿಲೆ ಮಾರ್ಗದಲ್ಲಿ ರಸ್ತೆಯ ಪಕ್ಕದಲ್ಲಿಯೇ 7. 17 ಎಕರೆ ವಿಸ್ತೀರ್ಣದಲ್ಲಿ ಈ ಮಾರುಕಟ್ಟೆ ಇದೆ. ಇದು ಕಳೆದ 30 ವರ್ಷಗಳಿಂದಲೂ ರೈತರಿಗೆ ಒಂದು ದಿನವೂ ಉಪಯೋಗವಾಗಿರುವುದನ್ನು ಯಾರೂ ಕಂಡಿಲ್ಲ. ಹೆಸರಿಗಷ್ಟೇ ಎಪಿಎಂಸಿ ಮಾರುಕಟ್ಟೆಯಾಗಿದ್ದು, ಯಾವುದೇ ರೀತಿಯ ಕಾರ್ಯಚಟುವಟಿಕೆಗಳು ಇಲ್ಲಿ ನಡೆಯದಿರುವುದು ರೈತ ಸಮುದಾಯಕ್ಕೆ ಬೇಸರವನ್ನುಂಟು ಮಾಡಿದೆ.
ಮಾರುಕಟ್ಟೆ ಜಾಗ ಏಕೆ ಸೂಕ್ತವಾಗಿ ಬಳಕೆ ಆಗುತ್ತಿಲ್ಲ ಎಂದು ಎಪಿಎಂಸಿ ಅಧಿಕಾರಿಗಳನ್ನು ಕೇಳಿದರೆ ಈ ಜಾಗ ನಮ್ಮದಲ್ಲ ಎಂಬ ರೀತಿಯಲ್ಲಿ ಉತ್ತರಗಳು ಬರುತ್ತವೆ. ಈ ಜಾಗದಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪಿಸಿ 30 ವರ್ಷಗಳು ಕಳೆದಿದ್ದರೂ ಈವರೆಗೆ ಯಾವುದೇ ಅಧಿಕಾರಿ, ಜನ ಪ್ರತಿನಿಧಿ ಇದರ ಸದ್ಬಳಕೆ ಬಗ್ಗೆ ಕ್ರಮ ವಹಿಸುವ ಗೋಜಿಗೆ ಹೋಗಿಲ್ಲ ಎಂಬುದೇ ಬೇಸರದ ಸಂಗತಿ.
ಮಾರುಕಟ್ಟೆಗೆ ಅಗತ್ಯವಿರುವ ಯಾವೊಂದು ಸೌಕರ್ಯಗಳು ಇಲ್ಲಿ ಇಲ್ಲದಿರುವುದು ಕೂಡ ಇದರ ಇಂದಿನ ಸ್ಥಿತಿಗೆ ಕಾರಣವಾಗಿದೆ. ಮಾರುಕಟ್ಟೆ ಪ್ರಾಂಗಣದ ತುಂಬೆಲ್ಲಾ ಮುಳ್ಳಿನ ಗಿಡಗಂಟಿಗಳು ಬೆಳೆದಿದೆ. ನಿರ್ವಹಣೆ ಇಲ್ಲದೇ ಪಾಳುಬಿದ್ದಿರುವ ಮಾರುಕಟ್ಟೆಯೊಳಗೆ ಹೋಗಲು ಭಯಪಡುವ ಪರಿಸ್ಥಿತಿ ಇದೆ.
ಅನೇಕ ಬಾರಿ ಮಾರುಕಟ್ಟೆಯಲ್ಲಿ ಸಂತೆ ನಡೆಸಲು ಮುಂದಾದಾಗ ಬಿಂಡಿಗನವಿಲೆ ಹಾಗೂ ಅದ್ದಿಹಳ್ಳಿಯ ಸಾರ್ವಜನಿಕರ ನಡುವೆ ಮನಸ್ಥಾಪ ಉಂಟಾಗಿ ಪ್ರಕ್ರಿಯೆ ಅಲ್ಲಿಗೇ ನಿಂತಿದೆ. ಮೊದಲಿನಿಂದಲೂ ಬಿಂಡಿಗನವಿಲೆಯಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತಿದೆ. ಆ ಸಂತೆಯನ್ನು ಅದ್ದಿಹಳ್ಳಿಯ ಎಪಿಎಂಸಿ ಮಾರುಕಟ್ಟೆಗೆ ವರ್ಗಾಯಿಸಿ ಈ ಪ್ರಾಂಗಣದಲ್ಲಿ ಉದ್ದೇಶಿತ ಚಟುವಟಿಕೆ ನಡೆಸಲು ಅದ್ದಿಹಳ್ಳಿ ಹಾಗೂ ಸುತ್ತಲಿನ ಸಾರ್ವಜನಿಕರು ಅನೇಕ ಬಾರಿ ಪ್ರಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ಸಂತೆ ಸ್ಥಳಾಂತರವಾದರೆ ಬಿಂಡಿಗನವಿಲೆಯಲ್ಲಿ ವ್ಯವಹಾರ- ವಹಿವಾಟುಗಳು ಕುಂಠಿತಗೊಳ್ಳುತ್ತವೆ. ಹಾಗಾಗಿ ಇದ್ದಲ್ಲೇ ಸಂತೆ ಇರಲಿ ಎಂಬುದು ಗ್ರಾಮಸ್ಥರ ವಾದ.
ವಾರಕ್ಕೆ ಒಂದು ದಿನವಾದರೂ ಮಾರುಕಟ್ಟೆ ಪ್ರಾಂಗಣದಲ್ಲಿ ಸಂತೆ ನಡೆದರೆ ಇಲ್ಲಿಗೆ ಒಂದಷ್ಟು ಜೀವ ಕಳೆ ಬಂದಂತಾಗುತ್ತದೆ ಎಂಬುದು ಅದ್ದಿಹಳ್ಳಿ ಹಾಗೂ ಸುತ್ತಲಿನ ಸಾರ್ವಜನಿಕರ ಆಶಯ. ಆದರೆ ಇದಕ್ಕೆ ಬಲ ನೀಡಲು ಅಕ್ಕಪಕ್ಕದ ಗ್ರಾಮಸ್ಥರು ಮುಂದಾಗುತ್ತಿಲ್ಲ.
ಅಕ್ರಮ ಚಟುವಟಿಕೆಗಳ ತಾಣ: ಅದ್ದಿಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರುಕಟ್ಟೆಗೆ ಸಂಬಂಧಿಸಿದ ವ್ಯವಹಾರ ನಡೆಯದಿರುವುದರಿಂದ ಇಲ್ಲಿ ಪೊದೆ ಬೆಳೆದಿದೆ. ಸಂಜೆ ಆದೊಡನೆ ಇದು ಮದ್ಯಪ್ರಿಯರ ಆವಾಸ ಸ್ಥಳವಾಗಿರುತ್ತದೆ. ಕಾನೂನುಬಾಹಿರ ಚಟುವಟಿಕೆಗಳೇ ಇಲ್ಲಿ ಹೆಚ್ಚಾಗಿ ನಡೆಯುತ್ತದೆ. ಸುತ್ತಲಿನ ಕೆಲವು ನಿವಾಸಿಗಳು ಕಸ, ಕಡ್ಡಿ ಮತ್ತು ತ್ಯಾಜ್ಯಗಳನ್ನು ಮಾರುಕಟ್ಟೆಯೊಳಗೆ ಹಾಕುತ್ತಿದ್ದಾರೆ. ಹೀಗೆಯೇ ಆದರೆ ಇದು ತ್ಯಾಜ್ಯದ ಡಂಪಿಂಗ್ ಯಾರ್ಡ್ ಆಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.
ಮಳೆಗೆ ಸೋರುವ ಛಾವಣಿ: ಮಾರುಕಟ್ಟೆಯ ಮಧ್ಯಭಾಗದಲ್ಲಿ ಒಂದು ಕಟ್ಟೆಯನ್ನು ನಿರ್ಮಿಸಿದ್ದು ಅದಕ್ಕೆ ಶೀಟ್‌ಗಳಿಂದ ಛಾವಣಿ ನಿರ್ಮಿಸಲಾಗಿದೆ. ಇಲ್ಲಿಯೂ ನಿರ್ವಹಣೆ ಇಲ್ಲದ ಕಾರಣ ಕೆಲವು ಶೀಟ್‌ಗಳು ಮಳೆ- ಗಾಳಿಗೆ ಹಾರಿಹೋಗಿವೆ. ಮಳೆಬಂದರೆ ಸೋರುವ ಪರಿಸ್ಥಿತಿಯನ್ನು ತಲುಪಿವೆ. ಕುಡಿಯುವ ನೀರಿನ ಸೌಲಭ್ಯ ಇಲ್ಲ. ವಿದ್ಯುತ್ ಸಂಪರ್ಕ ಇಲ್ಲ. ಆವರಣಕ್ಕೆ ಸುತ್ತ ಕಾಂಪೌಂಡ್ ಇಲ್ಲ. ಇತ್ತೀಚೆಗೆ ಶೌಚಗೃಹ ನಿರ್ಮಿಸಿದ್ದರೂ ಅದಕ್ಕೆ ನೀರಿನ ಸೌಲಭ್ಯ ಇಲ್ಲ.
ಬರಗಾಲದಲ್ಲಿ ಹುಲ್ಲು ಸಂಗ್ರಹ: ಈ ಮಾರುಕಟ್ಟೆ ಸರ್ಕಾರದ ವತಿಯಿಂದ ಒಂದು ಬಾರಿ ಮಾತ್ರ ಉಪಯೋಗಕ್ಕೆ ಬರುತ್ತದೆ. ಅದು ಬರಗಾಲದ ಸಂದರ್ಭದಲ್ಲಿ ಜಾನುವಾರುಗಳಿಗೆ ಹುಲ್ಲು ಸಂಗ್ರಹಿಸಲು ಮಾತ್ರ ಬಳಕೆಯಾಗುತ್ತಿದೆ. ಉಳಿದ ಸಂದರ್ಭದಲ್ಲಿ ಇದು ಎಪಿಎಂಸಿ ಮಾರುಕಟ್ಟೆಯೇ ಎಂಬ ಅನುಮಾನ ಮೂಡುವಂತಿದೆ. ಅದ್ದಿಹಳ್ಳಿ ಎಪಿಎಂಸಿ ಮಾರುಕಟ್ಟೆ ಕೋವಿಡ್ ಸಂದರ್ಭದಲ್ಲಿ ಮಾತ್ರ ಬಳಕೆಗೆ ಬಂತು. ಅಂತರ ಪಾಲನೆ ಕಡ್ಡಾಯವಾಗಿದ್ದ ಅಂದಿನ ದಿನಗಳಲ್ಲಿ ಸಂತೆ ನಡೆಸಲು ತಾಲೂಕು ಆಡಳಿತ ಅವಕಾಶ ಕಲ್ಪಿಸಿತ್ತು. ನಂತರದಲ್ಲಿ ಸಂತೆ ಮೊದಲಿನಂತೆ ಬಿಂಡಿಗನವಿಲೆಗೇ ವರ್ಗಾವಣೆಗೊಂಡಿತು. ಶಿಕ್ಷಣ ಇಲಾಖೆ ಕೆಲತಿಂಗಳ ಹಿಂದೆ ಬಿಂಡಿಗನವಿಲೆ ಹೋಬಳಿಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿದ್ದೇ ಕೊನೆಯ ಚಟುವಟಿಕೆ.
ಕಳೆದ 30 ವರ್ಷಗಳಿಂದ ಪಾಳು ಬಿದ್ದಿರುವ ಮಾರುಕಟ್ಟೆಗೆ ಕಾಯಕಲ್ಪ ಕಲ್ಪಿಸುವಲ್ಲಿ ಇದುವರೆಗೂ ಆಡಳಿತ ನಡೆಸಿರುವ ಜನಪ್ರತಿನಿಧಿಗಳು ಗಮನ ನೀಡಿಲ್ಲ. ಪ್ರಸ್ತುತ ಶಾಸಕರು ಹಾಗೂ ಕೃಷಿ ಸಚಿವರು ನಾಗಮಂಗಲ ಕ್ಷೇತ್ರದವರಾಗಿದ್ದು ಎಪಿಎಂಸಿ ಮಾರುಕಟ್ಟೆಗೆ ಜೀವ ತುಂಬುವರೆಂಬ ಮಹದಾಸೆ ಸಾರ್ವಜನಿಕರಲ್ಲಿದೆ.