ಉದ್ಯಮಶೀಲತೆಗೆ ಸಕಾರಾತ್ಮಕ ಯೋಚನೆ ಅಗತ್ಯ

rudset program
Published on

ಉದ್ಯೋಗ ವಿಭಾಗದ ರಾಜ್ಯ ಜಂಟಿ ನಿರ್ದೇಶಕಿ ಸಾಧನಾ ಪೋಟೆ ಅಭಿಮತ ಕೌಶಲ ತರಬೇತಿ ಸಮಾರೋಪ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮನುಷ್ಯರ ಪ್ರತಿ ಬೇಡಿಕೆಗೂ ಎಲ್ಲ ಬಗೆಯ ಮಾರುಕಟ್ಟೆ ಲಭ್ಯವಿದೆ. ಕೌಶಲ್ಯಗಳನ್ನು ರೂಢಿಸಿಕೊಂಡು ಪ್ರಮಾಣಿಕವಾಗಿ ಸ್ವಯಂ ಉದ್ಯೋಗ ಆರಂಭಿಸಬೇಕು. ಉದ್ಯಮಶೀಲ ವ್ಯಕ್ತಿಯಾಗಬಯಸುವವನಿಗೆ ಸಕಾರಾತ್ಮಕ ಯೋಚನೆ ಇರಬೇಕು ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಉದ್ಯೋಗ ವಿಭಾಗದ ಜಂಟಿ ನಿರ್ದೇಶಕಿ ಸಾಧನಾ ಪೋಟೆ ಹೇಳಿದರು.
ನೆಲಮಂಗಲ ತಾಲೂಕು ಅರಿಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೊಬೈಲ್ ಫೋನ್ ರಿಪೇರಿ ಹಾಗೂ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿಯ ಸಮಾರೋಪದಲ್ಲಿ ಮಾತನಾಡಿದರು. ಸಮಾಜದಲ್ಲಿ ಜನರು ಏನೆಂದುಕೊಳ್ಳುತ್ತಾರೋ ಎಂಬ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಂಡರೆ ಮುಂದೆ ಯಶಸ್ಸು ಅರಸಿಕೊಂಡು ಬರುತ್ತದೆ. ಕೊಂಕು ಮಾತುಗಳಿಗೆ ಕಿವಿಕೊಡದೆ ದೃಢ ಮನಸ್ಸಿನಿಂದ ಪ್ರಾಮಾಣಿಕವಾಗಿ ದುಡಿಮೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂಥ ವಿಷಯಗಳಲ್ಲಿ ವೃತ್ತಿಗೌರವ ಮುಖ್ಯವೇ ಹೊರತು, ಸಾಮಾಜಿಕ ಸ್ಥಾನಮಾನವಲ್ಲ ಎಂದು ಅಭಿಪ್ರಾಯಪಟ್ಟರು. ನೈಜವಾದ ಸ್ವಾಭಿಮಾನದ ಜ್ಞಾನ ದೊರೆಯುವುದು ಸ್ವ ಉದ್ಯೋಗದಲ್ಲಿ ಎಂದರೆ ತಪ್ಪಾಗಲಾರದು ಬಹಳಷ್ಟು ವ್ಯಕ್ತಿತ್ವದ ಮೌಲ್ಯಗಳ ಬೇಡಿಕೆಯನ್ನು ಸ್ವಯಂ ಉದ್ಯೋಗ ಎಂಬುದು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಎತ್ತರಕ್ಕೆ ಬೆಳೆಯಬೇಕು: ಸಂಸ್ಥೆಯಲ್ಲಿ ಗಳಿಸಿದ ಕೌಶಲವನ್ನು ಅಭಿವೃದ್ಧಿಪಡಿಸಿಕೊಂಡು ಕೆಲಸದ ಗುಣಮಟ್ಟದ ಕುರಿತು ಕಾಳಜಿವಹಿಸುವ ಮೂಲಕ ಕಾರ್ಯನಿರ್ವಹಿಸಿ ಭವಿಷ್ಯದಲ್ಲಿ ಶಿಬಿರಾರ್ಥಿಗಳು ಎತ್ತರಕ್ಕೆ ಬೆಳೆಯಬೇಕು ಎಂದು ರುಡ್‌ಸೆಟ್ ಸಂಸ್ಥೆ ನಿರ್ದೇಶಕ ರವಿಕುಮಾರ ಆಶಿಸಿದರು.

ಯಾವುದೇ ಕೌಶಲ ತರಬೇತಿಯಾದರೂ ಅದನ್ನು ಸದ್ಭಳಕೆ ಮಾಡಿಕೊಳ್ಳುವುದರಿಂದ ಉತ್ತಮ ಭವಿಷ್ಯ ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳು ತರಬೇತಿ ಕಾರ್ಯಾಗಾರದ ಉದ್ದೇಶವನ್ನು ಸಲಗೊಳಿಸಬೇಕು ಎಂದು ಉಪನ್ಯಾಸಕಿ ವಿದ್ಯಾಹೊಸಮನಿ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net