

ಮೈಸೂರು: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಜವಾಬ್ದಾರಿ ಹೊತ್ತಿರುವ ಮಹಿಳೆಯರಿಗೆ ಲಘು ಮೋಟಾರ್ ವಾಹನ ಚಾಲನೆಯ ತರಬೇತಿಯನ್ನು ರುಡ್‌ಸೆಟ್ ಸಂಸ್ಥೆಯಿಂದ ಎನ್‌ಆರ್‌ಎಲ್‌ಎಂ ಯೋಜನೆಯಡಿ ಕೈಗೊಳ್ಳಲಾಗಿತ್ತು. ತರಬೇತಿಯ ಸಮಾರೋಪ ಸಮಾರಂಭ ಶನಿವಾರ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಪ್ರಭುಸ್ವಾಮಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಮಾತನಾಡಿ, ಗ್ರಾಮೀಣ ಮಹಿಳೆ ಯರು ಸ್ವಾವಲಂಬಿಗಳಾಗಿ ಆತ್ಮವಿಶ್ವಾಸದಿಂದ ಬದುಕಬೇಕು. ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಎನ್‌ಆರ್‌ಎಲ್‌ಎಂ ಯೋಜನೆಯ ಮೂಲಕ ಹಮ್ಮಿಕೊಳ್ಳುತ್ತಿದ್ದು, ಯೋಜನೆಯನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ವಿಲೇವಾರಿಯ ಜವಾಬ್ದಾರಿಯನ್ನು ಮಹಿಳೆಯರು ವಹಿಸಿಕೊಂಡಿರುವುದು ಸಂತಸದ ವಿಚಾರ. ಯಾವ ಕೆಲಸವು ಕೀಳೂ ಅಲ್ಲ, ಮೇಲು ಅಲ್ಲ. ನಾವು ಮನಪೂರ್ವಕವಾಗಿ ಮಾಡುವ ಪ್ರತಿ ಕೆಲಸ ದೊಡ್ಡ ಫಲ ನೀಡುತ್ತದೆ. ನಾವು ಮಾಡುವ ಕೆಲಸವನ್ನು ಪ್ರೀತಿ ಮತ್ತು ವಿಶ್ವಾಸದಿಂದ ಮಾಡುವುದರಿಂದ ಕೆಲಸದಲ್ಲಿ ಗೌರವ ದೊರೆಯುತ್ತದೆ ಎಂದು ಹೇಳಿದರು.
ಎಚ್.ಡಿ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧರಣೇಶ್ ಮಾತನಾಡಿ, ಈಗಾಗಲೇ ನಮ್ಮ ತಾಲೂಕಿನಲ್ಲಿ ಇದೇ ಸಂಸ್ಥೆಯಲ್ಲಿ ಲಘು ಮೋಟಾರ್ ವಾಹನ ಚಾಲನಾ ತರಬೇತಿ ಪಡೆದು ಮಹಿಳೆಯರು ಯಶಸ್ವಿಯಾಗಿ ವಾಹನ ಚಾಲನೆ ಮಾಡುತ್ತಿದ್ದು, ಪ್ರತಿನಿತ್ಯ ಘನತ್ಯಾಜ್ಯ ವಿಲೇವಾರಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದರು.
ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮಾಜಿ ರಾಜ್ಯ ನಿರ್ದೇಶಕ ಎಂ.ಲಿಂಗಣ್ಣ ಮಾತನಾಡಿ, ಗ್ರಾಮಗಳ ತ್ಯಾಜ್ಯ ವಿಲೇವಾರಿಗೆ ಮಹಿಳೆಯರು ಮುಂದೆ ಬಂದು ಗ್ರಾಮಗಳ ಸ್ವಚ್ಚತೆ ಹೆಚ್ಚಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಮಹಿಳೆಯರು ಸಂಘಗಳ ಮೂಲಕ ಆರ್ಥಿಕ ವ್ಯವಹಾರದಲ್ಲಿ ತೊಡಗಿರುವುದು ಸಂತೋಷ ಎಂದರು.
ರುಡ್‌ಸೆಟ್ ಸಂಸ್ಥೆ ನಿರ್ದೇಶಕಿ ಕೆ.ಎಸ್. ಸರಿತಾ ಮಾತನಾಡಿ, ನೀವು ಒಂದು ತಿಂಗಳು ಉತ್ತಮವಾಗಿ, ಶಿಸ್ತುಬದ್ಧವಾಗಿ ತರಬೇತಿಯನ್ನು ಯಶಸ್ವಿಯಾಗಿ ಪಡೆದಿರುವಿರಿ. ಮುಂದೆಯೂ ದೈರ್ಯವಾಗಿ, ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ. ನಿಮ್ಮ ಸುರಕ್ಷತೆಯ ಜತೆಗೆ ಸಾರಿಗೆ ನಿಯಮಗಳನ್ನು ಪಾಲಿಸಿ ಎಂದು ಸಲಹೆ ನೀಡಿದರು. ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಬಸವರಾಜು, ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕಿ ಲತಾಮಣಿ ಹಾಗೂ ಇತರರು ಇದ್ದರು.