

ಕೊಲ್ಹಾರ: ಪಟ್ಟಣದ ಸಂಗಮೇಶ್ವರ ವೃತ್ತದಲ್ಲಿ ಜಗದ್ಗುರು ರೇಣುಕಾಚಾರ್ಯ ಸೌಹಾರ್ದ ಸಹಕಾರಿ ಸಂಘ ನಿಯಮಿತ ವತಿಯಿಂದ ಜಂಗಮ ವಟುಗಳ ಅಯ್ಯಚಾರ ಹಾಗೂ ಶಿವಭಕ್ತರ ಶಿವದೀಕ್ಷಾ (ಲಿಂಗದೀಕ್ಷೆ) ಕಾರ್ಯಕ್ರಮ ಸೋಮವಾರ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ 7.30 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರ ಸಮ್ಮುಖದಲ್ಲಿ ವೇದಮೂರ್ತಿಗಳಾದ ಶಾಂತಯ್ಯ ಲಟಕಿಮಠ, ವೀರಘಂಟಯ್ಯ ಹಿರೇಮಠ ವೇದ ಮಂತ್ರಗಳ ಪಠಣ ಮಾಡಿದರು.
45 ವಟುಗಳಿಗೆ ಜಂಗಮ ಸಮಾಜದ ಪದ್ಧತಿ ಪ್ರಕಾರ ಅಯ್ಯಚಾರ ನಡೆಯಿತು. ಹಲವಾರು ಭಕ್ತರಿಗೆ ಲಿಂಗದೀಕ್ಷೆ ಹಾಗೂ ಶ್ರೀಗಳ ಪಾದೋದಕ ಪೂಜೆ ವಿಧಾನ ಬೋಧನೆ ಮಾಡಲಾಯಿತು.
ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಜಂಗಮ ಸಮಾಜದಲ್ಲಿ ಜನಿಸಿದ ಪ್ರತಿಯೊಬ್ಬರೂ ಅಯ್ಯಚಾರ ಸಂಸ್ಕಾರ ಪಡೆದು ಪೂಜೆ ಅನುಷ್ಟಾನಗಳನ್ನು ಚಾಚುತಪ್ಪದೆ ಪಾಲಿಸಬೇಕು. ಭಕ್ತರಿಗೆ ಶುಭ ಕೋರುವ ಕಾಯಕದಲ್ಲಿ ತೊಡಗಿಕೊಂಡಾಗ ಮಾತ್ರ ನಾವು ನೀವು ವೀರಶೈವ ಸಂಪ್ರದಾಯದ ಲಿಂಗಾಯತ ಜಂಗಮ ಸಮಾಜದಲ್ಲಿ ಬದುಕಿರುವುದಕ್ಕೆ ಸಾರ್ಥಕವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರಯ್ಯ ಗಣಕುಮಾರ, ಶ್ರೀಶೈಲ ಕಂಬಿ, ರಾಚಯ್ಯ ಗಣಕುಮಾರ, ಗುರುಸಿದ್ದಯ್ಯ ಪರಡಿಮಠ, ರುದ್ರಯ್ಯ ಮಠಪತಿ, ರಾಜಶೇಖರಯ್ಯ ಹಿರೇಮಠ, ಶಂಕ್ರಯ್ಯ ಮಠ, ಬಸಯ್ಯ ಗಣಾಚಾರಿ, ರಾಮಣ್ಣ ಉಪ್ಪಲದಿನ್ನಿ, ಸಂಗಪ್ಪ ಹುಚ್ಚಪ್ಪಗೋಳ, ಪ್ರೇಮಾ ಆಲಗುಂಡಿ, ಸುಗಲಾಬಾಯಿ ಮಠ ಹಾಗೂ ಬಳೂತಿ, ಹಣಮಾಪೂರ, ತಡಲಗಿ, ಮಟ್ಟಿಹಾಳ, ಸಿದ್ದನಾಥ ಸುತ್ತಮುತ್ತಲಿನ ಇನ್ನಿತರ ಗ್ರಾಮಗಳ ಜಂಗಮ ಸಮಾಜದ ಬಂಧುಗಳು ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.