

ಹುಬ್ಬಳ್ಳಿ: ನಿಜಭೃತ್ಯರ ಮಾತಿಗೆ ಸ್ಪಂದಿಸಬೇಕೆಂದು ಧರೆಗಿಳಿದು ಬಂದ, ಶೀಘ್ರ ವರ ಕೊಡುವ ಮಹಾದೇವನೇ ಶ್ರೀ ರುದ್ರದೇವರು ಎಂದು ವೇದಪೀಠ ಅಧ್ಯಕ್ಷ ಡಾ. ಕಂಠಪಲ್ಲಿ ಸಮೀರಣಾಚಾರ್ಯ ಹೇಳಿದರು.
ಮಹಾಶಿವರಾತ್ರಿ ನಿಮಿತ್ತ ವಿಜಯನಗರ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಮತ್ತು ವಿಜಯಾಂಜನೇಯ ವೇದ ಸಂಸ್ಕೃತ ವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಇಲ್ಲಿಯ ವಿಜಯನಗರದ ಶ್ರೀ ಮಾರುತಿ-ಮೃತ್ಯುಂಜಯ ದೇವಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ರುದ್ರಸ್ವಾಹಾಕಾರ ಯಾಗದಲ್ಲಿ ಅವರು ಆಶೀರ್ವಚನ ನೀಡಿದರು.
ಪ್ರೇಮಮಯಿಗಳಾದ ತನ್ನ ಭಕ್ತರನ್ನು ಪೋಷಿಸಿದ, ಪ್ರೇಮಿಸಿದ ಕರುಣಾಮಯಿ ದೇವರು ಶಿವ ಎಂದರು.
ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಮತ್ತು ದೀಪಾ ಚವ್ಹಾಣ ದಂಪತಿ ಯಾಜಮಾನ್ಯ ವಹಿಸಿದ್ದರು.
ಸೊಸೈಟಿ ಅಧ್ಯಕ್ಷ ವಿ.ಸಿ. ದಿನೇಶ, ಪದಾಧಿಕಾರಿಗಳಾದ ವಾಸುದೇವ ಗೋಡಖಿಂಡಿ, ಎನ್.ಕೆ. ಜೋಶಿ, ಆನಂದ ಪಾಟೀಲ, ವಿನೋದ ದೇಶಪಾಂಡೆ, ಕಾಥೋಟೆ, ಸಂಧ್ಯಾ ದೀಕ್ಷಿತ, ಮಧುಕರ ಸಾಂಬ್ರಾಣಿಕರ, ಸುಬ್ಬಣ್ಣಾಚಾರ್ ಹಾಗೂ ವೇದಪೀಠ ದ ಮಹಿಳಾ ವೃಂದದವರು ಉಪಸ್ಥಿತರಿದ್ದರು.