

ಮುಧೋಳ: ಈ ಭಾಗದ ರೆಡ್ಡಿ ಸಮುದಾಯದ ಜನರು ಶಿಕ್ಷಣದ ಕಾರ್ಯಕ್ಕಾಗಿ ನೀಡಿರುವ ದಾನವು ಮುಂಬರುವ ದಿನಗಳಲ್ಲಿ ಸಮಾಜದ ಏಳ್ಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ ಎಂದು ಶಿರಹಟ್ಟಿ-ಬಾಲೆ ಹೊಸೂರಿನ ಫಕೀರಶ್ವರ ಸಂಸ್ಥಾನಮಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ನಗರದ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ ಜಯಂತ್ಯುತ್ಸವ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವಯಸ್ಸಿನಲ್ಲಿ ಚಿಕ್ಕವರಾದರೂ ದಯಾನಂದ ಪಾಟೀಲರು ಸಮಾಜದ ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ನಮ್ಮ ಭಾಗದಲ್ಲಿ ಅತ್ಯುನ್ನತ ಶಾಲೆಗಳು ನಿರ್ಮಾಣಗೊಂಡಿದ್ದರೂ ಈ ಭಾಗದ ಪಾಲಕರು ತಮ್ಮ ಮಕ್ಕಳನ್ನು ದಕ್ಷಿಣ ಕನ್ನಡ, ದಕ್ಷಿಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕೊಡಿಸಲು ಮುಂದಾಗುತ್ತಿದ್ದಾರೆ. ಇಂತಹ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿಯೇ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.
ಉಪನ್ಯಾಸಕ ಸಂಜಯ ನಡುವಿನಮನಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ವೇಮನರು ಹಾಗೂ ಹೇಮರಡ್ಡಿ ಮಲ್ಲಮ್ಮನವರು ತಮ್ಮ ಬದುಕು ಮುಡಿಪಾಗಿಟ್ಟಿದ್ದರು. ರಾಜಮನೆತನದ ಪಿತೃವಾತ್ಸಲ್ಯ ತೊರೆದು ಪಾರಮಾರ್ಥಿಕ ಆನಂದಕ್ಕಾಗಿ ಕಾಡಿನೆಡೆಗೆ ತೆರಳಿ ಕಠಿಣ ತಪಸ್ಸಿನಿಂದ ಯೋಗಿಯಾಗಿ ರೂಪುಗೊಂಡರು. ಇಪ್ಪತ್ತು ಸಾವಿರ ಪದ್ಯಗಳ ಮೂಲಕ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಮಣ್ಣಿನ ಸಂಸ್ಕಾರ ಹೊಂದಿರುವ ರಡ್ಡಿ ಜನಾಂಗ ಶ್ರೇಷ್ಠ ಎಂದರು.
ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆ ಅಧ್ಯಕ್ಷ ದಯಾನಂದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಎಪ್ಪತ್ತರ ದಶಕದ ಉಪಯುಕ್ತ ಕಾಣಿಕೆ ಈ ಸಂಸ್ಥೆಯಾಗಿದೆ. ಶಿಕ್ಷಣದ ಮೂಲಕ ಸಮಾಜವನ್ನು ಮುನ್ನೆಲೆಗೆ ತರುವ ನಮ್ಮ ಪ್ರಯತ್ನಕ್ಕೆ ಸಮಾಜದ ಮಹನೀಯರು ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಶೈಕ್ಷಣಿಕ ಕೇಂದ್ರದ ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು, ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಶಾಲಾರಂಭವಾಗಲಿದೆ ಎಂದರು.
ಹುಲಕೋಟಿಯ ಎಸ್.ಆರ್. ಪಾಟೀಲ, ಹನಮಂತಗೌಡ ಬಿರಾದಾರ ಪಾಟೀಲ, ಕೆ.ಆರ್. ಮಾಚಪ್ಪನವರ, ಎಲ್.ವಿ. ಕುರ್ತಕೋಟಿ, ಎ.ಜಿ. ಪಾಟೀಲ, ಡಾ.ಸತೀಶ ಮಲಘಾಣ, ತಮ್ಮಣ್ಣಪ್ಪ ಅರಳಿಕಟ್ಟಿ ಶಿವನಗೌಡ ನಾಡಗೌಡ, ಶಂಕರ ಪಾಟೀಲ, ಮಹಾದೇವ ದಾಸರಡ್ಡಿ, ರಮೇಶ ನಿಡೋಣಿ ಇದ್ದರು.
ದಾನಿಗಳಿಗೆ ಸನ್ಮಾನ: ವೇಮನ ಶಿಕ್ಷಣ ಸಂಸ್ಥೆಗೆ ಸಹಾಯಹಸ್ತ ನೀಡಿದ ಶಿವನಗೌಡ ನಾಡಗೌಡ, ಶಾಂತವ್ವ ಪಾಟೀಲ, ಜಗದೀಶ, ರವಿ, ಅಶೋಕ ಪಾಟೀಲ, ಅರವಿಂದ ಕಳ್ಳಿಗುತ್ತಿ, ಮಂಜುನಾಥ ಪಾಟೀಲ, ಅಭಯ ಸರನಾಯಕ, ಹನಮಪ್ಪ ಪಂಚಗಾವಿ, ತಮ್ಮಣ್ಣ ಉದಪುಡಿ, ದೀಪಕ ಪಾಟೀಲ, ಸುಭಾಸ ಸಂಗಣ್ಣವರ, ಸುರೇಶ ಹೊಸೂರ, ಸತೀಶ ಒಂಟಗೋಡಿ, ಗಿರಿಯಪ್ಪ ತುಳಸಿಗೇರಿ, ಪದ್ಮಾ ಬಿರಾದಾರ ಪಾಟೀಲ, ಸುಜಾತಾ ಕಡಿವಾಳ ಅವರನ್ನು ಸನ್ಮಾನಿಸಲಾಯಿತು.