ದೂರಾಗುತ್ತಿಲ್ಲ ರಬ್ಬರ್ ಕೃಷಿಕರ ಸಂಕಷ್ಟ

rubber new
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಜಿಲ್ಲೆಯಲ್ಲಿ ರಬ್ಬರ್ ಕೃಷಿಕರ ಸಂಕಷ್ಟ ದೂರಾಗುತ್ತಿಲ್ಲ. ಭಾರಿ ನಿರೀಕ್ಷೆಯೊಂದಿಗೆ ರಬ್ಬರ್ ಬೆಳೆಸಿದ್ದ ಕೃಷಿಕರೆಲ್ಲರೂ ಇಂದು ಬೆಲೆ ಕುಸಿತದಿಂದ ಕಂಗೆಟ್ಟಿದ್ದಾರೆ. ರಬ್ಬರ್ ಧಾರಣೆ ಕಿಲೋ ಒಂದಕ್ಕೆ 200ರ ಗಡಿ ದಾಟುತ್ತಿದ್ದಂತೆ ಗೇರು ತೋಟ ಹಾಗೂ ಅಡಕೆ ಮರಗಳನ್ನೂ ಕಡಿದು ರಬ್ಬರ್ ನಾಟಿ ಮಾಡಿದವರು ಇಂದು ಕೈ ತಲೆಗಿರಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

ಬೆಲೆ ಕುಸಿತದಿಂದ ಇಂದು ಕೆಲವರು ರಬ್ಬರ್ ತೋಟದ ನಿರ್ವಹಣೆಯನ್ನೇ ಕೈಬಿಟ್ಟಿದ್ದಾರೆ. ರಬ್ಬರ್ ತೋಟಗಳ ಕಳೆನಾಶ ಸರಿಯಾಗಿ ನಡೆಯುತ್ತಿಲ್ಲ. ಮರಗಳಿಗೆ ಗೊಬ್ಬರ ಹಾಕುತ್ತಿಲ್ಲ. ಮಳೆಗಾಲದಲ್ಲಿ ಗಾರ್ಡ್ ಅಳವಡಿಸಿ ಟ್ಯಾಪಿಂಗ್ ನಡೆಸುವ ಕೆಲಸಕ್ಕೂ ಮುಂದಾಗುತ್ತಿಲ್ಲ. ಆದರೆ ಇವೆಲ್ಲದರ ನಡುವೆ ಲಾಭ- ನಷ್ಟದ ಲೆಕ್ಕಾಚಾರ ನಡೆಸದೆ, ನಿರಂತರ ಟ್ಯಾಪಿಂಗ್ ನಡೆಸುವ ಮೂಲಕ ಮರಗಳ ಪೋಷಣೆಯಲ್ಲಿ ತೊಡಗಿದವರೂ ಇದ್ದಾರೆ. ಕೇರಳ ತೋಟಗಾರಿಕಾ ನಿಗಮ ಭಾರಿ ಪ್ರಮಾಣದಲ್ಲಿ ಗೇರು ಮರಗಳನ್ನು ಕಡಿದು, ರಬ್ಬರ್ ಬೆಳೆಸಿದೆ. ಕಾಸರಗೋಡು ಎಸ್ಟೇಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಬ್ಬರ್ ಬೆಳೆಸಲಾಗುತ್ತಿದೆ.

ಒಟ್ಟಿನಲ್ಲಿ ಕೇರಳದ ರಬ್ಬರ್ ಬೆಳೆ ಕೃಷಿಕರಿಗೆ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ತಂದುಕೊಡುತ್ತಿದೆ. ರಬ್ಬರ್ ಧಾರಣೆ ಕಿಲೋ ಒಂದಕ್ಕೆ ಕನಿಷ್ಠ 175ರೂ. ಲಭಿಸಬೇಕಾಗಿದೆ ಎಂಬುದು ಬಹುತೇಕ ಕೃಷಿಕರ ಅಭಿಪ್ರಾಯ.

ನೆರವಾದ ಪ್ರೋತ್ಸಾಹಧನ

ಕೇರಳ ಸರ್ಕಾರ ರಬ್ಬರ್ ಕೃಷಿಕರನ್ನು ಸಂಕಷ್ಟದಿಂದ ಪಾರಾಗಿಸಲು ಜಾರಿಗೆ ತಂದ ಪ್ರೋತ್ಸಾಹಧನ ಯೋಜನೆ ಒಂದಷ್ಟು ಪ್ರಯೋಜನ ತಂದುಕೊಟ್ಟಿದೆ. ರಬ್ಬರ್ ಉತ್ಪಾದಕರ ಸಂಘಗಳ ಮೂಲಕ ಹೆಸರು ನೋಂದಾಯಿಸಿಕೊಂಡಲ್ಲಿ ಈ ಯೋಜನೆಯ ಫಲಾನುಭವಿಗಳಾಗಬಹುದು. ಇಂದು ಮಾರುಕಟ್ಟೆ ಧಾರಣೆ 120ರಿಂದ 132ರ ಅಂಚಿನಲ್ಲಿದೆ. ಮಾರುಕಟ್ಟೆ ಧಾರಣೆಯ ವ್ಯತ್ಯಾಸ ಮೊತ್ತವನ್ನು 150 ರೂ. ಗೆ ನಿಗದಿಪಡಿಸಿ ಕೃಷಿಕರಿಗೆ ನೀಡುವುದು ಯೋಜನೆಯಾಗಿದೆ. ಇದರಿಂದ ಕೇರಳದ ಕೃಷಿಕರಿಗೆ ಬೆಲೆಕುಸಿತ ಕಂಡರೂ ಸರಾಗವಾಗಿ 150ರೂ. ಧಾರಣೆ ಲಭ್ಯವಾಗುತ್ತಿದೆ. ಕೇರಳ ಸರ್ಕಾರ ಇದಕ್ಕಾಗಿ ಪ್ರತಿ ವರ್ಷ 500 ಕೋಟಿ ರೂ. ಮೀಸಲಿರಿಸುತ್ತದೆ. ಆದರೆ ಕೇಂದ್ರ ಬಜೆಟ್‌ನಲ್ಲಿ ರಬ್ಬರ್ ಕೃಷಿಕರಿಗೆ ನೆರವಾಗುವ ರೀತಿಯಲ್ಲಿ ಯೋಜನೆ ಇರಿಸಿಕೊಳ್ಳಬಹುದು ಎಂಬ ಕೃಷಿಕರ ಭರವಸೆ ಹುಸಿಯಾಗಿದೆ.

ಮುಂಚೂಣಿಯಲ್ಲಿ ಕೇರಳ ದೇಶದಲ್ಲಿ ಕೇರಳ ರಾಜ್ಯ ರಬ್ಬರ್ ಬೆಳೆಯಲ್ಲಿ ಮುಂಚೂಣಿಯಲ್ಲಿದೆ. ದೇಶದಲ್ಲಿ 12 ಲಕ್ಷಕ್ಕೂ ಹೆಚ್ಚು ಮಂದಿ ರಬ್ಬರ್ ಬೆಳೆಗಾರರಿದ್ದು, ಇದರಲ್ಲಿ 8 ಲಕ್ಷದವರೆಗೆ ಕೇರಳೀಯರಾಗಿದ್ದಾರೆ. ದೇಶದಲ್ಲಿ ಪ್ರತಿ ವರ್ಷ ರಬ್ಬರ್ ಮತ್ತು ರಬ್ಬರ್ ಉತ್ಪನ್ನಗಳ ಮೂಲಕ 80 ಸಾವಿರ ಕೋಟಿ ರೂ.ಗೂ ಹೆಚ್ಚಿನ ವ್ಯವಹಾರ ನಡೆಯುತ್ತಿದೆ. ಆದರೆ ಸರ್ಕಾರದಿಂದ ರಬ್ಬರ್ ಬೆಳೆಗೆ ಹೆಚ್ಚಿನ ಉತ್ತೇಜನ ಲಭಿಸುತ್ತಿಲ್ಲ ಎಂಬುದಾಗಿ ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 17 ಸಾವಿರ ಹೆಕ್ಟರ್‌ಗೂ ಹೆಚ್ಚು ಪ್ರದೇಶದಲ್ಲಿ ರಬ್ಬರ್ ಬೆಳೆಸಲಾಗುತ್ತಿದೆ. ಇದರಲ್ಲಿ ಕಾಸರಗೋಡು ವಿಭಾಗದಲ್ಲಿ 6,811 ಹೆಕ್ಟರ್ ಹಾಗೂ ಉಳಿದವುಗಳನ್ನು ಕಾಞಂಗಾಡು ವಲಯದಲ್ಲಿ ಬೆಳೆಸಲಾಗುತ್ತಿದೆ.

ಬೆಲೆ ಕುಸಿತದಿಂದ ಕೃಷಿಕರು ಎದೆಗುಂದದೆ, ಇರುವ ಧಾರಣೆಯಲ್ಲಿ ರಬ್ಬರ್ ಕೃಷಿಯನ್ನು ಲಾಭದಾಯಕವಾಗಿಸಲು ಸಾಧ್ಯವಿದೆ. ಕಡಿಮೆ ಖರ್ಚಿನೊಂದಿಗೆ ಉತ್ಪಾದನೆ ಹೆಚ್ಚಿಸುವ ಬಗ್ಗೆ ರಬ್ಬರ್ ಬೋರ್ಡ್ ಕೃಷಿಕರಲ್ಲಿ ನಿರಂತರ ಜಾಗೃತಿ ಮೂಡಿಸುವ ಕೆಲಸ ನಡೆಸುತ್ತಿದೆ. ರಬ್ಬರ್ ಬೊರ್ಡ್ ಅಧಿಕಾರಿಗಳು ನೀಡುವ ಸೂಚನೆ ಪಾಲಿಸುವುದರ ಜತೆಗೆ ತೋಟಗಳ ನಿರ್ವಹಣೆ ಬಗ್ಗೆಯೂ ಗಮನಹರಿಸಬೇಕು. ಪಿ.ಕೆ.ರಘುನಾಥ್, ಅಭಿವೃದ್ಧಿ ಅಧಿಕಾರಿ, ರಬ್ಬರ್‌ಬೋರ್ಡ್ ಪ್ರಾದೇಶಿಕ ಕಚೇರಿ ಕಾಸರಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net