ಅವ್ಯವಸ್ಥೆಯಿಂದ ಬಸವಳಿದ ಆರ್​ಟಿಒ ಕಚೇರಿಗಳು

dvg RTO sep 17-2
Published on

ಬೆಂಗಳೂರು: ಜನರಿಗೆ ಸುಗಮ ಸೇವೆ ಒದಗಿಸಬೇಕಾದ ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್​ಟಿಒ) ಅವ್ಯವಸ್ಥೆಗಳಿಂದಾಗಿ ಬಸವಳಿದಿವೆ. ಶೇ.50 ಹುದ್ದೆ ಖಾಲಿ ಉಳಿದಿರುವುದು, ಹಾಲಿ ಸಿಬ್ಬಂದಿಯ ಕೆಲಸ ಹೆಚ್ಚಿಸಿರುವುದು ಒಂದೆಡೆಯಾದರೆ 12 ವರ್ಷಗಳಿಂದ ಇನ್​ಸ್ಪೆಕ್ಟರ್​ಗಳಿಗೆ ಮುಂಬಡ್ತಿ ಕೊಟ್ಟಿಲ್ಲ. ಒಂದೆರಡು ದಿನದಲ್ಲಿ ಸಿಗಬೇಕಾದ ಎಲ್​ಎಲ್, ಡಿಎಲ್​ಗೂ ಸಾರ್ವಜನಿಕರು ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಇದು ಸಾಲದೆಂಬಂತೆ ಡ್ರೖೆವಿಂಗ್ ಸ್ಕೂಲ್ ಮಾಫಿಯಾ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸಿದೆ.

ಸಾರಿಗೆ ಇಲಾಖೆಗೆ ಒಟ್ಟಾರೆ 2650 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 1609 ಹುದ್ದೆ ಭರ್ತಿಯಾಗಿವೆ. ಇನ್ನೂ 1041 ಹುದ್ದೆಗಳು ಖಾಲಿ ಉಳಿದಿವೆ. ಪ್ರತಿಯೊಂದು ಆರ್​ಟಿಒದಲ್ಲಿ ಸರಾಸರಿ ಶೇ.50 ಹುದ್ದೆಗಳು ಖಾಲಿ ಉಳಿದಿವೆ. ಇದರಿಂದಾಗಿ ವಾಹನ ನೋಂದಣಿ, ಡಿಎಲ್, ಎಲ್​ಎಲ್ ಸೇರಿ ದಿನನಿತ್ಯದ ಕಚೇರಿ ಕೆಲಸಗಳು ವಿಳಂಬವಾಗುತ್ತಿದೆ. ಎಲ್​ಎಲ್ ಆನ್​ಲೈನ್ ಪರೀಕ್ಷೆಗೆ ಸಮಯ ನಿಗದಿಪಡಿಸಿಕೊಳ್ಳಲು 2 ರಿಂದ 7 ದಿನದಲ್ಲಿ ಸ್ಲಾಟ್ ಸಿಗಬೇಕು. ಆದರೆ, ಇನ್​ಸ್ಪೆಕ್ಟರ್​ಗಳ ಕೊರತೆಯಿಂದಾಗಿ 20ರಿಂದ 30 ದಿನಗಳು ಕಾಯಬೇಕಾಗುತ್ತಿದೆ. ಎಲ್​ಎಲ್ ಆದ ತಿಂಗಳ ಬಳಿಕ ಡಿಎಲ್ ಪರೀಕ್ಷೆಗೆ ಸಮಯ ಸಿಗಬೇಕಾದರೆ 2 ತಿಂಗಳು ಕಾಯಬೇಕಿದೆ. ಡ್ರೖೆವಿಂಗ್ ಸ್ಕೂಲ್​ಗಳ ಮಾಫಿಯಾದಿಂದಾಗಿ ಆನ್​ಲೈನ್ ಪರೀಕ್ಷೆಯ ಬಹುತೇಕ ಸ್ಲಾಟ್​ಗಳನ್ನು ಅವರೇ ಬುಕ್ ಮಾಡಿಕೊಳ್ಳುತ್ತಿದ್ದು, ಜನರಿಗೆ ಸ್ಲಾಟ್ ಸಿಗುವುದೇ ಅದೃಷ್ಟ ಎನ್ನುವಂತಾಗಿದೆ.

ತಲಾ ಆರ್​ಟಿಒದಲ್ಲಿ ಇಬ್ಬರು ಇನ್​ಸ್ಪೆಕ್ಟರ್​ಗಳಿದ್ದು, ಪ್ರತಿನಿತ್ಯ 30ರಿಂದ 50 ಜನರಿಗಷ್ಟೇ ಎಲ್​ಎಲ್/ಡಿಎಲ್ ಪರೀಕ್ಷೆ ನಡೆಯುತ್ತಿದೆ. ಅಗತ್ಯ ಸಿಬ್ಬಂದಿ ಇದ್ದರೆ ಪ್ರತಿದಿನ 150 ರಿಂದ 200 ಜನರಿಗೆ ಕೊಡಬಹುದು. ಒಂದು ಡಿಎಲ್ ಪರೀಕ್ಷೆಗೆ (ಕಾರು/ಬೈಕ್) ಕನಿಷ್ಠ 15 ರಿಂದ 30 ನಿಮಿಷ ಬೇಕಾಗುತ್ತದೆ. ಆನ್​ಲೈನ್ ಜತೆಗೆ ಕಾಗದಪತ್ರಗಳ ಮೂಲಕವೂ (ಮ್ಯಾನ್ಯುಯಲ್) ದಾಖಲೆಗಳನ್ನು ಸಂಗ್ರಹಿಸಬೇಕಿರುವುದರಿಂದ ಇನ್​ಸ್ಪೆಕ್ಟರ್​ಗಳಿಗೆ ಇನ್ನಷ್ಟು ಹೊರೆಯಾಗಿದೆ. ಅಪಘಾತ ವಾಹನ ಪರಿಶೀಲನೆ, ಸರ್ಕಾರಿ ವಾಹನ ಪರಿಶೀಲನೆ, ವಿಐಪಿಗಳಿಗೆ ವಾಹನ ಒದಗಿಸುವುದು ಸೇರಿ ಹಲವು ಹೆಚ್ಚುವರಿ ಜವಾಬ್ದಾರಿಗಳನ್ನೂ ಇನ್​ಸ್ಪೆಕ್ಟರ್​ಗಳ ಹೆಗಲಿಗೆ ವಹಿಸಿರುವುದು ಕೆಲಸದ ಒತ್ತಡ ಹೆಚ್ಚಿಸಿದೆ.

50 ವರ್ಷ ದಾಟಿದವರೇ ಜಾಸ್ತಿ: ಬೆಂಗಳೂರಲ್ಲೇ ಒಟ್ಟು 10 ಆರ್​ಟಿಒ ಕಚೇರಿಗಳಿದ್ದು, ಪ್ರತಿ ಕಚೇರಿಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಪೈಕಿ ಅರ್ಧದಷ್ಟು ಮಂದಿ 50 ವರ್ಷ ದಾಟಿದವರಾಗಿದ್ದಾರೆ. ಅವರಿಂದ ವೇಗದ ಕೆಲಸ ನಿರೀಕ್ಷಿಸಲು ಸಾಧ್ಯವಿಲ್ಲ. ಹೆಚ್ಚುವರಿ ಕೆಲಸ ಮಾಡಿಸಲು ಆಗುವುದಿಲ್ಲ ಎಂಬುದು ಅಧಿಕಾರಿಗಳ ಅಳಲು.

ಹೊಸ ತಂತ್ರಾಂಶ, ಹಳೇ ಕಂಪ್ಯೂಟರ್

ಇಲಾಖೆಯಲ್ಲಿ ಸಾರಥಿ-4 ತಂತ್ರಾಂಶ ಅಳವಡಿಸಲಾಗಿದೆ. ಆದರೆ, ಎಷ್ಟೋ ವರ್ಷಗಳ ಹಳೇ ಕಂಪ್ಯೂಟರ್​ಗಳೇ ಕಚೇರಿಯಲ್ಲಿವೆ. ಅವು ಬಹುತೇಕ ರಿಪೇರಿಗೆ ಬಂದಿದ್ದು, ಸಾಫ್ಟ್​ವೇರ್ ಅಪ್​ಡೇಟ್ ಆಗದ ಕಾರಣ ಕೆಲಸ ನಿರ್ವಹಿಸಲು ಕಷ್ಟವಾಗಿದೆ. ಒಬ್ಬರ ದಾಖಲಾತಿ ಅಪ್​ಲೋಡ್ ಮಾಡಲು ಗಂಟೆಗಟ್ಟಲೆ ಕಾಯಬೇಕು. ತಂತ್ರಾಂಶ ಬಳಕೆ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡದಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

12 ವರ್ಷದಿಂದ ಬಡ್ತಿ ಇಲ್ಲ

ಆರ್​ಟಿಒ ಇನ್​ಸ್ಪೆಕ್ಟರ್​ಗಳಿಗೆ 12 ವರ್ಷ ದಿಂದ ಒಂದು ಬಡ್ತಿಯನ್ನೂ ಕೊಟ್ಟಿಲ್ಲ, ವೇತನವನ್ನೂ ಹೆಚ್ಚಿಸಿಲ್ಲ! ಹುದ್ದೆಗಳು ಖಾಲಿ ಉಳಿದಿರುವುದರಿಂದ 2008ರಲ್ಲಿ ಸೇವೆಗೆ ಸೇರಿದ 60 ಇನ್​ಸ್ಪೆಕ್ಟರ್​ಗಳಿಗೆ ಬಡ್ತಿ ಸಿಕ್ಕಿಲ್ಲ. ಯಾವುದೇ ಬಡ್ತಿ ಪಡೆಯದೆ ಒಂದೇ ಹುದ್ದೆಯಲ್ಲಿ 10 ವರ್ಷ ಸೇವೆ ಮುಂದುವರಿಸಿದರೆ ಕಾಲಮಿತಿ ವೇತನ ಮುಂಬಡ್ತಿ ಕೊಡಬೇಕು ಎಂಬ ನಿಯಮವಿದೆ. ಅದೂ ಪಾಲನೆಯಾಗಿಲ್ಲ. ಸೀನಿಯರ್ ಇನ್​ಸ್ಪೆಕ್ಟರ್ ಹುದ್ದೆಗೆ ಬಡ್ತಿ ಕೊಟ್ಟರೆ ಇನ್​ಸ್ಪೆಕ್ಟರ್​ಗಳ ಹುದ್ದೆ ಖಾಲಿಯಾಗಿ ಕೆಲಸಕ್ಕೆ ತೊಂದರೆಯಾಗುತ್ತದೆ ಎಂಬುದು ಸಾರಿಗೆ ಇಲಾಖೆ ಅಭಿಪ್ರಾಯ. ಆದರೆ, ಎರಡೂ ಹುದ್ದೆಗಳ ಕಾರ್ಯವ್ಯಾಪ್ತಿಯಲ್ಲಿ ಹೆಚ್ಚು ಬದಲಾವಣೆ ಇಲ್ಲ. ಹೀಗಾಗಿ ಬಡ್ತಿ ಕೊಟ್ಟರೂ ಇನ್​ಸ್ಪೆಕ್ಟರ್​ಗಳ ಕೊರತೆ ಉಂಟಾಗುವುದಿಲ್ಲ ಎಂಬುದು ಇನ್​ಸ್ಪೆಕ್ಟರ್​ಗಳ ಅಭಿಪ್ರಾಯ.

ಆಫೀಸರ್ಸ್​ಗೆ ಅಪಮಾನ!

ಆರ್​ಟಿಒ ಇನ್​ಸ್ಪೆಕ್ಟರ್ ಹುದ್ದೆಯಲ್ಲಿರುವ ಇಬ್ಬರು ಮೇನಲ್ಲಿ ನಿವೃತ್ತಿ ಆಗಲಿದ್ದಾರೆ. ಇವರಿಬ್ಬರೂ ಮಾಜಿ ಯೋಧರಾಗಿದ್ದು, ಮಿಲಿಟರಿ ಸೇವೆ ನಂತರ ಸಾರಿಗೆ ಇಲಾಖೆಗೆ ಸೇರಿದ್ದರು. ಒಂದೂ ಹುದ್ದೆ ಬಡ್ತಿ ಅಥವಾ ವೇತನ ಬಡ್ತಿ ಇಲ್ಲದೆಯೇ ನಿವೃತ್ತಿ ಆಗುತ್ತಿದ್ದಾರೆ. ಬಡ್ತಿಗೆ ಶಿಫಾರಸು ಮಾಡಿದ್ದರೂ ಅದನ್ನು ಪರಿಗಣಿಸದೆ ಮಾಜಿ ಯೋಧರು ಹಾಗೂ ಅಧಿಕಾರಿಗಳಿಗೆ ಸಾರಿಗೆ ಇಲಾಖೆ ಅವಮಾನ ಮಾಡಿದೆ ಎಂಬ ಮಾತೂ ಕೇಳಿಬಂದಿದೆ.

ಹೊಸ ನೇಮಕಾತಿ ಆಗುತ್ತಿಲ್ಲ 

ಪ್ರತಿ ತಿಂಗಳು ಇಬ್ಬರಿಂದ ನಾಲ್ವರು ನಿವೃತ್ತಿಯಾಗುತ್ತಿದ್ದಾರೆ. ಆದರೆ, ಹೊಸದಾಗಿ ಒಬ್ಬರೂ ನೇಮಕ ಆಗುತ್ತಿಲ್ಲ. ಸದ್ಯ 250 ಆರ್​ಟಿಒ ಇನ್​ಸ್ಪೆಕ್ಟರ್ ಹುದ್ದೆಗಳು ಖಾಲಿಯಿವೆ. 2016ರಲ್ಲೇ 150 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಯಾಗಿದ್ದರೂ ಸೇವಾನುಭವ ಪತ್ರ ಸಲ್ಲಿಕೆ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಕೆಎಟಿ ಮೆಟ್ಟಿಲೇರಿದೆ.

ಮಹಾರಾಷ್ಟ್ರದಂತೆ ಇಲ್ಲೂ ಜಾರಿಯಾಗಲಿ

ಕೇಂದ್ರ ಸರ್ಕಾರ 2019ರ ಮಾರ್ಚ್​ನಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಆರ್​ಟಿಒ ಇನ್​ಸ್ಪೆಕ್ಟರ್​ಗಳ ನೇಮಕಾತಿಗೆ ಸೇವಾನುಭವ ಪತ್ರದ ಅಗತ್ಯವಿಲ್ಲ ಎಂದು ಹೇಳಿದೆ. ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳು ತಿದ್ದುಪಡಿ ಕಾಯ್ದೆಯನ್ವಯ ನೇಮಕಾತಿ ಆರಂಭಿಸಿವೆ. ಅದೇ ರೀತಿ ಕರ್ನಾಟಕದಲ್ಲೂ ತಿದ್ದುಪಡಿ ನಿಯಮ ಜಾರಿಗೆ ತಂದರೆ ಇನ್​ಸ್ಪೆಕ್ಟರಗಳ ನೇಮಕಾತಿ ಶೀಘ್ರ ಮುಗಿಯುತ್ತದೆ. ಅಲ್ಲದೇ ನೇಮಕಾತಿ ಪ್ರಕ್ರಿಯೆ, ಆಯ್ಕೆ ವಿಚಾರವಾಗಿ ಗೊಂದಲ, ವಿವಾದವೂ ಸೃಷ್ಟಿಯಾಗುವುದಿಲ್ಲ.

ಕೀರ್ತಿನಾರಾಯಣ ಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net