

ಹುಬ್ಬಳ್ಳಿ: ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನೀಡಲಾಗುವ ಡಿಎಲ್, ಆರ್ ಸಿ ಇತ್ಯಾದಿ ಕಾರ್ಡ್‌ಗಳ ಪೂರೈಕೆ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಶೀಘ್ರ "ಒಂದು ದೇಶ ಒಂದು ಕಾರ್ಡ್' ಯೋಜನೆ ಜಾರಿಯಾಗುವುದರಿಂದ ಸಮಸ್ಯೆ ನಿವಾರಣೆಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ಇಲ್ಲಿಯ ಗಬ್ಬೂರು ಕ್ರಾಸ್ ಬಳಿಯಲ್ಲಿ ಬುಧವಾರ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಡ್ ವಿತರಣೆಗಾಗಿ ರಾಜ್ಯ ಸರ್ಕಾರ ನೀಡಿದ್ದ 15 ವರ್ಷದ ಟೆಂಡರ್ ಅವಧಿ ಮುಗಿದಿದೆ. ಮೂರು ತಿಂಗಳು ಮುಂದುವರಿಸುವಂತೆ ಏಜೆನ್ಸಿಗೆ ತಿಳಿಸಲಾಗಿದೆ. ಅಷ್ಟರಲ್ಲಿ "ಒಂದು ಕಾರ್ಡ್' ಯೋಜನೆ ಜಾರಿಯಾಗಲಿದೆ. ದೇಶದಲ್ಲಿ ಒಂದೇ ಬಗೆಯ ವಾಹನ ಚಾಲನಾ ಪರವಾನಗಿ ಕಾರ್ಡ್ ಎಲ್ಲರಿಗೂ ದೊರೆಯಲಿದೆ ಎಂದರು.
ಚಾಲನಾ ಪರೀಕ್ಷೆ ಪಥ:
ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿಗೆ ಡ್ರೈವಿಂಗ್ ಟ್ರಾಕ್ ಇಲ್ಲ. ಇಲ್ಲಿ ಜಾಗ ಗುರುತಿಸಿ ಕೊಟ್ಟರೆ ಶೀಘ್ರ ವಾಹನ ಚಾಲನಾ ಪರೀಕ್ಷಾ ಪಥ ನಿಮಿರ್ಸಿ ಕೊಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ವ್ಯಾಪಕವಾಗಿ ಅವಳಿನಗರ ಬೆಳೆಯುತ್ತಿದೆ. ಸದ್ಯ ಧಾರವಾಡ ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ಮಾತ್ರ ಚಾಲನಾ ಪರೀಕ್ಷಾ ಟ್ರಾಕ್ ಇದೆ. ಎಲ್ಲರೂ ಅಲ್ಲಿಗೆ ಹೋಗಿ ಪರೀಕ್ಷೆ ಎದುರಿಸುವುದು ತೊಂದರೆಯಾಗುತ್ತದೆ. ಶಾಸಕ ಅಬ್ಬಯ್ಯ ಪ್ರಸಾದ ಅವರ ಪ್ರಸ್ತಾವನೆಯಂತೆ ನೂತನ ಕಚೇರಿ ಕಟ್ಟಡವನ್ನು 8 ಕೋಟಿ ರೂ. ವೆಚ್ಚದಲ್ಲಿ ಕೆಎಸ್ಆರ್ಟಿಸಿಯಿಂದ ನಿರ್ಮಿಸಿ ಕೊಡಲಾಗಿದೆ. ಇದೇ ರೀತಿ ಮೂರ್ನಾಲ್ಕು ಎಕರೆ ಜಾಗ ಗುರುತಿಸಿ ಕೊಟ್ಟರೆ ಶೀಘ್ರ ಟ್ರಾಕ್ ಮಾಡಿ ಕೊಡುತ್ತೇವೆ ಎಂದರು.
ರಾಜ್ಯದ ಏಳು ಕಡೆ ನೂತನವಾಗಿ ಸ್ವಯಂ ಚಾಲಿತ ಚಾಲನಾ ಪಥಗಳನ್ನು ನಿರ್ಮಿಸಲಾಗುತ್ತಿದೆ. ಸರಿಯಾಗಿ ವಾಹನ ಯಾರು ಚಲಾಯಿಸುತ್ತಾರೆಯೋ ಅವರಿಗೆ ಆಟೊಮೆಟಿಕ್ ಗುಣಾಂಕಗಳು ದೊರೆಯುತ್ತವೆ. ಅಂಥವರಿಗೆ ಮಾತ್ರ ಡಿಎಲ್ ಸಿಗಲಿದೆ ಎಂದರು.
ಸಾರಿಗೆ ಇಲಾಖೆಯಲ್ಲಿ 9 ಸಾವಿರ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕಟ್ಟಡದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸುಮಾರು 800 ಬಸ್ಗಳನ್ನು ನೀಡಲು ಸಚಿವ ರಾಮಲಿಂಗಾ ರೆಡ್ಡಿ ಅವರು ಅನುಮೋದಿಸಿದ್ದಾರೆ. ಈಗಾಗಲೇ ಧಾರವಾಡ ಜಿಲ್ಲೆಗೆ 50 ಬಸ್ ಗಳು ಬಂದಿವೆ. ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಈ ಯೋಜನೆಗಾಗಿ ಇನ್ನೂ 5 ಸಾವಿರ ಬಸ್ ಖರೀದಿಸುವ ಆಲೋಚನೆಯಲ್ಲಿ ಅವರು ಇದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ ಅವರು ಮಾತನಾಡಿ, ನವನಗರ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೆಚ್ಚಿನ ದಟ್ಟಣೆಯಿಂದಾಗಿ ಜನರಿಗೆ ತೊಂದರೆಯಾಗುತ್ತಿತ್ತು. ಇದೀಗ ನೂತನ ಕಚೇರಿ ಆರಂಭಿಸಿರುವುದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಬಹುದಿನದ ಕನಸು ಈಗ ಈಡೇರಿದೆ ಎಂದರು.
1.20 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಡ್ರೈವಿಂಗ್ ಟ್ರಾಕ್ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಾರಿಗೆ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಳು ಇಲ್ಲಿಯೇ ಆಗುವಂತೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಪ್ರಾದೇಶಿಕ ಸಾರಿಗೆ ಆಯುಕ್ತ ಡಾ. ಮಾರುತಿ ಸಾಂಬ್ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಓಂಕಾರೇಶ್ವರಿ ಸ್ವಾಗತಿಸಿದರು.
ಮುಖಂಡರಾದ ಸದಾನಂದ ಡಂಗನವರ, ಮೋಹನ ಅಸುಂಡಿ, ಮಹೇಂದ್ರ ಸಿಂಘಿ, ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ ಎಸ್., ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ, ಅಪ್ಪಯ್ಯ ನಾಲತವಾಡ, ಇತರರು ಉಪಸ್ಥಿತರಿದ್ದರು.