ಸೈಲೆನ್ಸರ್​ ಬದಲಿಸದಿದ್ದರೆ ವಾಹನ ಬಿಡಲ್ಲ!: ಕಠಿಣ ನಿಯಮಕ್ಕೆ ಸಾರಿಗೆ ಇಲಾಖೆ ಚಿಂತನೆ

00
Published on

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ದ್ವಿಚಕ್ರ ಹಾಗೂ ಕಾರುಗಳ ಸೈಲೆನ್ಸರ್​ ಮಾರ್ಪಾಡು ಮಾಡಿ ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ ವಾಹನಗಳ ಬಿಡುಗಡೆ ವೇಳೆ ಕೆಲವೊಂದು ಕಠಿಣ ನಿಯಮ ರೂಪಿಸಲು ಚಿಂತಿಸಿದ್ದಾರೆ.


ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸುತ್ತಿದ್ದರೂ ಬಹುತೇಕರು ನಿಯಮ ಉಲ್ಲಂನೆಯನ್ನೇ ಫ್ಯಾಶನ್​ ಮಾಡಿಕೊಂಡಿದ್ದಾರೆ. ದಂಡಕಟ್ಟಿದರಾಯ್ತು ಎಂಬ ಉಡಾಫೆಯಿಂದ ಮತ್ತೆ ಮತ್ತೆ ಸಂಚಾರ ನಿಯಮ ಗಾಳಿಗೆ ತೂರುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ಮುಖ್ಯವಾಗಿ ವಾಹನಗಳ ಸೈಲೆನ್ಸರ್​ ಮಾರ್ಪಾಡು ಮಾಡುವ ವಾಹನ ಸವಾರರರು ಹಲವು ಬಾರಿ ದಂಡ ಕಟ್ಟಿದ್ದರೂ ಸೈಲೆನ್ಸರ್​ಗಳನ್ನು ಯಥಾಸ್ಥಿತಿಯಲ್ಲಿಟ್ಟುಕೊಂಡೇ ಸಂಚರಿಸುತ್ತಿರುವುದು ಅಧಿಕಾರಿಗಳ ಕಣ್ಣು ಕೆಂಪಾಗಿಸಿದೆ. ಈ ಹಿನ್ನೆಲೆಯಲ್ಲಿ ಇಂಥ ಕೃತ್ಯಕ್ಕೆ ಬ್ರೇಕ್​ ಹಾಕಲು ಮುಂದಾಗಿರುವ ಅಧಿಕಾರಿಗಳು ಜಪ್ತಿ ಮಾಡಿದ ವಾಹನಗಳಿಗೆ ಸ್ಥಳದಲ್ಲೇ ಹೊಸ ಸೈಲೆನ್ಸರ್​ ಅಳವಡಿಸಬೇಕು. ನಂತರವಷ್ಟೇ ವಾಹನ ಬಿಡುಗಡೆ ಎಂಬ ನಿಯಮ ರೂಪಿಸಲು ಮುಂದಾಗಿದ್ದಾರೆ.


ಅಲೆದರೆ ಬುದ್ದಿ ಬರುತ್ತದೆ: ವಾಹನಗಳ ಸೈಲೆನ್ಸರ್​ ಬದಲಾವಣೆ ಸರಳ ವಿಧಾನವಲ್ಲ, ಆಯಾ ವಾಹನಗಳ ಸೈಲೆನ್ಸರ್​ಗಳು ತಕ್ಷಣ ಸಿಗುವುದೂ ಕಷ್ಟಸಾಧ್ಯ, ಜತೆಗೆ ಸೈಲೆನ್ಸರ್​ಗಳನ್ನು ಬದಲಾವಣೆ ಮಾಡಲು ಸೂಕ್ತ ಮೆಕಾನಿಕ್​ ಬೇಕು. ಇಷ್ಟೆಲ್ಲ ಮಾಡಬೇಕಾದರೆ ನಿಯಮ ಉಲ್ಲಂಘಿಸಿದ ಸವಾರರು ಬೇಸತ್ತು ಹೋಗುತ್ತಾರೆ. ಮತ್ತೆ ಇಂಥ ಶೋಕಿ ಮಾಡುವ ದುಸ್ಸಾಹಸ ಮಾಡುವುದಿಲ್ಲ. ಇದರಿಂದ ಒಮ್ಮೆ ದಂಡದೊಂದಿಗೆ ಸ್ಥಳದಲ್ಲೇ ಸೈಲೆನ್ಸರ್​ ಬದಲಾವಣೆ ಮಾಡಿದರೆ ತಪ್ಪುಗಳ ಪುನರಾವರ್ತನೆಗೆ ಬ್ರೇಕ್​ ಹಾಕಿದಂತಾಗುತ್ತದೆ ಎಂಬುದು ಅಧಿಕಾರಿಗಳ ಹೊಸ ಆಲೋಚನೆಯಾಗಿದೆ.


ಕೇರಳ ಸವಾರನಿಗೆ ಬಿಸಿಮುಟ್ಟಿಸಿದ ಇಲಾಖೆ: ಜು.3 ರಂದು ಮುಂಜಾನೆ 5 ಗಂಟೆ ಸಮಯದಲ್ಲಿ ಸಾರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಟಿ.ಹಾಲಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಸೈಲೆನ್ಸರ್​ ಮಾರ್ಪಾಡು ಮಾಡಿಕೊಂಡು ಕರ್ಕಶ ಶಬ್ದಮಾಡುತ್ತಾ ಸಾಗುತ್ತಿದ್ದ ವಾಹನಗಳನ್ನು ತಡೆದು ಜಪ್ತಿ ಮಾಡಿದ್ದರು. ಈ ವೇಳೆ ಜಪ್ತಿ ಮಾಡಿದ ಕೇರಳದ ವಾಹನವೊಂದರ ಮಾಲೀಕನಿಗೆ ಹೊಸ ಸೈಲೆನ್ಸರ್​ ಅಳವಡಿಸಿದ ಬಳಿಕವೇ ಬಿಡುಗಡೆ ಮಾಡುವುದಾಗಿ ತಾಕೀತು ಮಾಡಿದ್ದರು. ಆತ ಹೊಸ ಸೈಲೆನ್ಸರ್​ ತಂದು ಅಧಿಕಾರಿಗಳ ಕಣ್ಣೆದುರೆ ಅಳವಡಿಸಿದ ಬಳಿಕವಷ್ಟೇ ವಾಹನಕ್ಕೆ ಬಿಡುಗಡೆ ಭಾಗ್ಯ ಕರುಣಿಸಲಾಗಿತ್ತು.


ಹೃದಯರೋಗಿಗಳಿಗೆ ಆಪತ್ತು: ಇಂಥ ವಾಹನ ಸವಾರರ ಉಪಟಳದಿಂದ ಈ ರಸ್ತೆಗಳಲ್ಲಿ ಸಾಗುವ ಹೃದಯರೋಗಿಗಳಿಗೆ ಆತಂಕ ಎದುರಿಸುವಂತಾಗಿದೆ. ಕರ್ಕಶ ಶಬ್ದಕ್ಕೆ ಹೆದರಿ ಇನ್ನಿತರ ವಾಹನ ಸವಾರರು ನಿಯಂತ್ರಣ ತಪ್ಪಿ ಅಪಘಾತಕ್ಕೊಳಗಾಗುವ ಅಪಾಯವೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಸೈಲೆನ್ಸರ್​ ಮಾರ್ಪಾಡು ಮಾಡಿಕೊಂಡು ಸಂಚರಿಸುವ ವಾಹನ ಸವಾರಿಗೆ ದಂಡ ಪ್ರಯೋಗದೊಂದಿಗೆ ಬಿಸಿ ಮುಟ್ಟಿಸುವುದು ಅನಿವಾರ್ಯವಾಗಿದೆ.

ಸೈಲೆನ್ಸರ್​ಗಳನ್ನು ಮಾರ್ಪಾಡು ಮಾಡಿ ಕರ್ಕಶ ಶಬ್ದದಲ್ಲಿ ಅತೀ ವೇಗವಾಗಿ ಸಾಗುವುದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಚಲಾಯಿಸುವುದು, ತ್ರಿಬಲ್​ ರೈಡಿಂಗ್​, ವ್ಹೀಲಿಂಗ್​ನಂಥ ನಿಯಮ ಉಲ್ಲಂನೆಗೆ ವಿರುದ್ಧ ಕಾರ್ಯಾಚರಣೆ ನಡೆಸಿದ್ದು ಒಂದೇ ದಿನ 120 ಬೈಕ್​ಗಳನ್ನು ಜಪ್ತಿ ಮಾಡಿ, ಸೈಲೆನ್ಸರ್​ ಮಾರ್ಪಾಡು, ವ್ಹೀಲಿಂಗ್​ ಮತ್ತಿತರ ಆರೋಪದಡಿ 137 ಪ್ರಕರಣ ದಾಖಲಿಸಲಾಗಿದೆ.

| ಕೆ.ಟಿ.ಹಾಲಸ್ವಾಮಿ ಸಾರಿಗೆ ಇಲಾಖೆ ಜಂಟಿ ಆಯುಕ್ತ

ಯುವಕರಲ್ಲಿ ಸೈಲೆನ್ಸರ್​ ಮಾರ್ಪಾಡು ಮಾಡಿಕೊಳ್ಳುವ ಶೋಕಿ ಮಿತಿಮೀರಿದೆ. ಕರ್ಕಶ ಶಬ್ಧ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದೆ, ಇದರಿಂದ ಇನ್ನಿತರ ವಾಹನಗಳು ಅಪಘಾತಕ್ಕೀಡಾಗುವ ಅಪಾಯವೂ ಇದೆ, ಹೃದಯ ಸಂಬಂಧಿತ ರೋಗಿಗಳಿಗೆ ಅಪಾಯದ ಕರೆಗಂಟೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಕೃತ್ಯಕ್ಕೆ ಬ್ರೇಕ್​ ಹಾಕಲು ಕೆಲವೊಂದು ಕಠಿಣ ನಿಲುವು ತಳಿಯಲು ಚಿಂತಿಸಲಾಗಿದೆ.

| ಉಮೇಶ್​ ಸಾರಿಗೆ ಇಲಾಖೆ ಅಧಿಕಾರಿ (ಎಆರ್​ಟಿಒ) ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net