ಆರ್‌ಒ, ಎಆರ್‌ಒಗಳಿಗಿನ್ನೂ ಸಿಕ್ಕಿಲ್ಲ ಮುಕ್ತಿ ; ಗ್ರಾಪಂ ಚುನಾವಣೆ ಫಲಿತಾಂಶ ಮುಗಿದರೂ ಪ್ರಾಧ್ಯಾಪಕರು, ಉಪನ್ಯಾಸಕರು, ಮುಖ್ಯಶಿಕ್ಷಕರನ್ನು ಬಿಡುಗಡೆ ಮಾಡಿಲ್ಲ

dc office 1
Published on

ತುಮಕೂರು : ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದು 18 ದಿನಗಳಾದರೂ ಚುನಾವಣಾಧಿಕಾರಿ (ಆರ್‌ಒ) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ (ಎಆರ್‌ಒ) ನೇಮಕಗೊಂಡಿರುವವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ.

ಡಿಸೆಂಬರ್‌ನಲ್ಲಿ ಗ್ರಾಪಂ ಚುನಾವಣೆ ಪ್ರಕ್ರಿಯೆ ಆರಂಭವಾದಾಗ ನೇಮಕಗೊಂಡಿದ್ದ ಆರ್‌ಒ, ಎಆರ್‌ಒಗಳನ್ನು ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಪ್ರಕ್ರಿಯೆ ಮುಗಿದರೂ ಮುಕ್ತಿಗೊಳಿಸಿಲ್ಲ.

ಪ್ರತಿ ಗ್ರಾಪಂಗೆ ಚುನಾವಣಾಧಿಕಾರಿಯನ್ನಾಗಿ ಗ್ರೇಡ್-2 (ಯುಜಿಸಿ ವೇತನ ಪಡೆಯುತ್ತಿರುವ ಪ್ರಾಧ್ಯಾಪಕರು, ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು) ಹಾಗೂ ಸಹಾಯಕ ಚುನಾವಣಾಧಿಕಾರಿಯನ್ನಾಗಿ ಶಿರಸ್ತೇದಾರ್ ಅಥವಾ ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ನಿಯೋಜಿಸಲಾಗಿತ್ತು. ಜಿಲ್ಲೆಯ 329 ಗ್ರಾಪಂಗಳಿಗೆ ತುಮಕೂರು ವಿವಿಯ 14 ಪ್ರಾಧ್ಯಾಪಕರು, ನೂರಾರು ಪದವಿಪೂರ್ವ ಕಾಲೇಜು ಉಪನ್ಯಾಸಕರು ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ನೇಮಿಸಲಾಗಿತ್ತು. ಇದೀಗ ಕರೊನಾ ಕಾರ್ಮೋಡ ಸರಿದು ಹಂತಹಂತವಾಗಿ ಶಾಲಾ-ಕಾಲೇಜುಗಳು ಆರಂಭವಾಗುತ್ತಿರುವುದರಿಂದ ಉಪನ್ಯಾಸಕರ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ನಿಭಾಯಿಸುವುದೇ ದೊಡ್ಡ ಕಷ್ಟವೆನಿಸಿದೆ.

ವಿವಿಗಳಲ್ಲಿ ಪದವಿ ಸೆಮಿಸ್ಟರ್ ಪರೀಕ್ಷಾ ಪ್ರಕ್ರಿಯೆ ಆರಂಭವಾಗಿವೆ. ಪ್ರಾಧ್ಯಾಪಕರಿಲ್ಲದೆ ಈ ಕೆಲಸಕ್ಕೂ ಹಿನ್ನಡೆಯಾಗಿದೆ. ಚುನಾವಣಾ ಹೆಸರಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಪ್ರಾಧ್ಯಾಪಕರನ್ನು ಬಿಡುಗಡೆಗೊಳಿಸದೇ ಇರುವುದರಿಂದ ಇತ್ತ ಶಾಲಾ-ಕಾಲೇಜುಗಳಿಗೆ ತೆರಳಿ ಪಾಠ ಮಾಡುವಂತಿಲ್ಲ. ಎಸ್ಸೆಸ್ಸೆಲ್ಸಿ, ಪಿಯುಸಿ ಜತೆಗೆ ಪದವಿ ಸೆಮಿಸ್ಟರ್ ಪರೀಕ್ಷೆಗಳು ಹತ್ತಿರವಾಗುತ್ತಿರುವುದರಿಂದ ಆ ಪ್ರಕ್ರಿಯೆಯಲ್ಲೂ ತೊಡಗಿಸಿಕೊಳ್ಳಲು ತೊಡಕಾಗಿದೆ.

ರಿರ್ಟನಿಂಗ್ ಆಫೀಸರ್, ಎಆರ್‌ಒ ಅವರನ್ನು ಕರ್ತವ್ಯದಿಂದ ಬಿಡಗಡೆಗೊಳಿಸಲು 4-5 ದಿನಗಳ ಹಿಂದೆಯೇ ಆದೇಶಿಸಿದ್ದೇನೆ. ಕೆಲವು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾದ್ದರಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಲು ತಡವಾಗಿದೆ. ತುಮಕೂರು ತಾಲೂಕಿನಲ್ಲಿ ಆರ್‌ಒ, ಎಆರ್‌ಒ ಬಿಡುಗಡೆ ಮಾಡದೇ ಇರುವ ಬಗ್ಗೆ ಮಾಹಿತಿ ಇಲ್ಲ. ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾಧಿಕಾರಿ 41 ಗ್ರಾಪಂಗಳ 746 ಅಭ್ಯರ್ಥಿಗಳು ಚುನಾಯಿತರಾಗಿದ್ದು, ಇವರಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು 4 ಪ್ರತಿಯಲ್ಲಿ ಸಲ್ಲಿಸಬೇಕಿದ್ದರಿಂದ ಇನ್ನೂ ಆರ್‌ಒ, ಎಆರ್‌ಒ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿಲ್ಲ. ಪ್ರಕ್ರಿಯೆ ಪೂರ್ಣಗೊಂಡರೆ ಮಂಗಳವಾರ ಬಿಡುಗಡೆ ಮಾಡಲಾಗುವುದು. ಜಿ.ವಿ.ಮೋಹನ್‌ಕುಮಾರ್ ತಹಸೀಲ್ದಾರ್, ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net