ದಾಖಲೆಗಳ ಪಾರದರ್ಶಕತೆಯೇ ಆರ್‌ಟಿಐ

rti
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗೂ ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ ಹಕ್ಕು(ಆರ್‌ಟಿಐ)ನ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ. ಹರೀಶ್‌ಕುಮಾರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯತಿ, ಪೊಲೀಸ್ ಇಲಾಖೆ ವತಿಯಿಂದ ದೇವನಹಳ್ಳಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಮಾಹಿತಿ ಹಕ್ಕು ಬಹಳ ಸರಳ ಹಾಗೂ ಗಂಭೀರ ಸ್ವರೂಪದ್ದಾಗಿದ್ದು ಸರ್ಕಾರವನ್ನು ಬುಡಮೇಲು ಮಾಡುವ ಶಕ್ತಿ ಕೂಡ ಇದೆ ಜನಪರ ಕಾನೂನು ಜಾರಿಯಾದ ನಂತರ ಅದರ ಬಗ್ಗೆ ಸರ್ಕಾರಿ ಅಧಿಕಾರಿಗಳು ತಿಳಿದಿರಬೇಕು ಎಂದರು.

ದುರುಪಯೋಗ ಬೇಡ: ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳದೆ ಸಮಾಜದ ನೈತಿಕತೆ ಸಾಮಾಜಿಕ ಸ್ವಾತಂತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಮಾಹಿತಿ ಕೇಳಬೇಕು ಎಂದು ಆಯುಕ್ತರು ತಿಳಿಸಿದರು. ಮುಖ್ಯವಾಗಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಹಣಕಾಸು, ನರೇಗಾ, ಕಂದಾಯ, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆಗಳಲ್ಲಿ ಹೆಚ್ಚು ಆರ್‌ಟಿಐ ಅರ್ಜಿಗಳು ಬರುತ್ತವೆ. ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದಲ್ಲಿ ಶೀಘ್ರ ವಿಲೇವಾರಿ ಮಾಡಬಹುದು ಎಂದರು.

ಠಾಣೆಗಳಲ್ಲಿ ಕ್ಯಾಮರಾ ಇರಬೇಕು: ಪೊಲೀಸ್‌ಠಾಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬ ಸುಪ್ರೀಂಕೋರ್ಟ್ ಹೇಳಿಕೆಯನ್ನು ಆಧರಿಸಿ ಕಡ್ಡಾಯವಾಗಿ ಎಲ್ಲ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಹಾಗೆಯೇ ಅವುಗಳನ್ನು ಒಂದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪಾಲಿಸುವುದು ಅವಶ್ಯಕ ಎಂದು ಆಯುಕ್ತರು ತಿಳಿಸಿದರು. ಮಾಹಿತಿ ಅಧಿಕಾರಿ ಯಾವುದೇ ಕಾರಣವಿಲ್ಲದೇ ಮಾಹಿತಿ ನೀಡದಿದ್ದಲ್ಲಿ ಅಥವಾ ದುರುದ್ದೇಶದಿಂದ ತಪ್ಪಾದ ಮಾಹಿತಿ ನೀಡಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ ಜತೆಗೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಾಲಕಾಲಕ್ಕೆ ಅರ್ಜಿಗಳ ವಿಲೇವಾರಿ ಮಾಡಬೇಕು ಎಂದರು.

ಜನಸ್ನೇಹಿ ಕಾಯ್ದೆ: ರಾಜ್ಯ ಮಾಹಿತಿ ಆಯೋಗದ ಆಯುಕ್ತೆ ಡಾ.ಮಮತಾ ಮಾತನಾಡಿ, ಈ ಕಾಯ್ದೆಯು ಸಾರ್ವಜನಿಕ ಜನ ಸ್ನೇಹಿ ಕಾಯ್ದೆಯಾಗಿದೆ. ಇದನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು. 6(1) ಅಧಿನಿಯಮದ ಪ್ರಕಾರ ಮಾಹಿತಿ ಕೋರಿ ಅರ್ಜಿ ಬಂದರೆ ಅಂತಹ ಅರ್ಜಿಗೆ 30 ದಿನಗಳ ಒಳಗಾಗಿ ಪ್ರತಿ ಪುಟಕ್ಕೆ ಎರಡು ರೂ.ಗಳಂತೆ ಹಣ ಪಾವತಿಸಿಕೊಂಡು ಮಾಹಿತಿ ನೀಡಬೇಕು, ನಿಗದಿತ ಕಾಲಮಾನಕ್ಕೆ ಮಾಹಿತಿ ನೀಡಲು ಸಾಧ್ಯವಾಗದಿದ್ದಲ್ಲಿ ಉಚಿತವಾಗಿ ಮಾಹಿತಿ ನೀಡಬೇಕು. 41ಎ ಮತ್ತು 41ಬಿ ಯನ್ನು ಎಲ್ಲ ಕಚೆರಿಗಳಲ್ಲಿ ಕಡ್ದಾಯವಾಗಿ ಅಳವಡಿಸಬೇಕು. ಅಧಿಕಾರಿಗಳಿಗೆ ಕಾಲಕಾಲಕ್ಕೆ ತರಬೇತಿ ನೀಡಬೇಕು ಕಾಯ್ದೆಯ ನಿರ್ಲಕ್ಷ್ಯತೆ ಆಗಬಾರದು ಎಂದರು.

ಜಿಲ್ಲೆಯಲ್ಲಿ 1440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ: ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಮಾತನಾಡಿ, ಎಲ್ಲ ಅಧಿಕಾರಿ ಸಿಬ್ಬಂದಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಸಂಪೂರ್ಣ ಅರಿವು ಹೊಂದಿದ್ದಲ್ಲಿ ಮಾತ್ರ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ಒದಗಿಸಲು ಸಾಧ್ಯ ಎಂದರು. ರಾಜ್ಯದಲ್ಲಿ 45000 ದ್ವಿತೀಯ ಹಂತದ ಮೇಲ್ಮನವಿ ಪ್ರಕರಣಗಳು ಬಾಕಿ ಇದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯು 9 ನೇ ಸ್ಥಾನದೊಂದಿಗೆ 1440 ದ್ವಿತೀಯ ಮೇಲ್ಮನವಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net