

ಮೈಸೂರು: ಅರಮನೆ ಮಂಡಳಿ ಕಚೇರಿಗೆ ವ್ಯಕ್ತಿಯೊಬ್ಬ ಅಕ್ರಮವಾಗಿ ಪ್ರವೇಶಿಸಿ ಕಚೇರಿಯ ಗ್ಲಾಸ್ ಒಡೆದು ಹಾಕಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗೆ ಕೊಲೆಬೆದರಿಕೆಯೊಡ್ಡಿದ್ದು, ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರ್‌ಟಿಐ ಕಾರ್ಯಕರ್ತ ಎಂ.ಕೆ. ಯಶವಂತ ಕುಮಾರ್ ಎಂಬಾತ ಜು.19 ರಂದು ಕಚೇರಿಗೆ ಆಗಮಿಸಿ ಟಿ.ಎಸ್. ಸುಬ್ರಹ್ಮಣ್ಯ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಈ ಬಗ್ಗೆ ಸುಬ್ರಹ್ಮಣ್ಯ ಅವರು ಪ್ರಶ್ನಿಸಿದಾಗ ಕೊಲೆಬೆದರಿಕೆಯೊಡ್ಡಿದಾನೆ. ಅಲ್ಲದೆ, ಕಚೇರಿಯ ಟೇಬಲ್ ಮೇಲೆ ಇದ್ದ ಗ್ಲಾಸ್‌ಅನ್ನು ಒಡೆದು ಹಾಕಿದ್ದಾನೆ. ಈ ಸಂದರ್ಭ ಅರಮನೆ ಮಂಡಳಿಯ ಹೊರಗುತ್ತಿಗೆ ಭದ್ರತಾ ಸಿಬ್ಬಂದಿ ಜಿ. ವೆಂಕಟೇಶ್ ಹಾಗೂ ಯುವರಾಜ ತಡೆಯಲು ಬಂದಾಗ ಅವರಿಗೂ ಕೊಲೆಬೆದರಿಕೆಯೊಡ್ಡಿದ್ದಾನೆ.
ಸುಬ್ರಹ್ಮಣ್ಯ ವಿರುದ್ಧ ಯಶವಂತ ಕುಮಾರ್ ಇತ್ತೀಚೆಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದ. ಈ ವಿಚಾರವಾಗಿ ಅರಮನೆ ಮಂಡಳಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರು ಸುಬ್ರಹ್ಮಣ್ಯ ಅವರನ್ನು ವಿಚಾರಣೆ ನಡೆಸುತ್ತಿದ್ದ ಸಂದರ್ಭ ಸ್ಥಳಕ್ಕೆ ಆಗಮಿಸಿದ ಯಶವಂತ ಕುಮಾರ್ ಸುಬ್ರಹ್ಮಣ್ಯ ಅವರನ್ನು ನಿಂದಿಸಿ ಕೊಲೆಬೆದರಿಕೆಯೊಡ್ಡಿದ್ದಾನೆ. ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಟಿ.ಎಸ್.ಸುಬ್ರಹ್ಮಣ್ಯ ಅವರು ದೇವರಾಜ ಠಾಣೆಗೆ ಶನಿವಾರ ದೂರುಸಲ್ಲಿಸಿದ್ದಾರೆ.