ನಿವೇಶನ ವಾಪಸ್ ಪಡೆಯಲು ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಆಗ್ರಹ

7
Published on


ಮೈಸೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಿರುವ 14 ನಿವೇಶನಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ನಗರದ ಮುಡಾ ಕಚೇರಿಗೆ ಸೋಮವಾರ ಭೇಟಿ ನೀಡಿ ನೀಡಿದ ಅವರು, ಮುಡಾ ಆಯುಕ್ತ ರಘುನಂದನ್ ಅವರನ್ನು ಭೇಟಿ ಮನವಿ ಸಲ್ಲಿಸಿದರು.
‘2001ರಲ್ಲಿಯೇ ಕೆಸರೆ ಗ್ರಾಮದ ಸರ್ವೆ ನಂ. 464ರಲ್ಲಿ ಮುಡಾ ನಿವೇಶನಗಳನ್ನು ರಚಿಸಿ ನಂತರದಲ್ಲಿ ಫಲಾನುಭವಿಗಳಿಗೆ ಹಂಚಿದೆ. 2004ರಲ್ಲಿ ಸಿದ್ದರಾಮಯ್ಯ ಬಾವಮೈದ ಸದರಿ ಜಮೀನನ್ನು ಖರೀದಿ ಮಾಡಿದ್ದಾರೆ. ಈ ಖರೀದಿಯೇ ಅಕ್ರಮ ಆಗಿರುವುದರಿಂದ ಅವರಿಗೆ ನಿವೇಶನ ನೀಡಲು ಬರುವುದಿಲ್ಲ. ಹೀಗಾಗಿ ಹಂಚಿಕೆ ಆಗಿರುವ 14 ನಿವೇಶನಗಳನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಯಿಂದ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಈಗ ನಾನು ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಕ್ಕೆ ಬ್ಲಾೃಕ್‌ಮೇಲರ್ ಎನ್ನುತ್ತಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಯಡಿಯೂರಪ್ಪ ಬಗ್ಗೆಯೂ ನಾನು ಆರೋಪ ಮಾಡಿದ್ದೆ. ಜಗದೀಶ ಶೆಟ್ಟರ್ ಬಗ್ಗೆ ನಾನು ಆರೋಪಿಸಿದ್ದಾಗ ಇದೇ ಸಿದ್ದರಾಮಯ್ಯ ಆಗ ಟಿ.ಜೆ.ಅಬ್ರಾಹಂ ಸತ್ಯ ಹೇಳಿದ್ದಾರೆ ಎಂದಿದ್ದರು. ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಾದಾಗ ಸದನದ ಒಳಗೆ ನನ್ನ ಬಗ್ಗೆ ಸಿದ್ದರಾಮಯ್ಯ ಒಳ್ಳೆ ಕೆಲಸ ಮಾಡಿದ್ದಾರೆ ಎಂದಿದ್ದರು. ಆದರೆ ಇದೀಗ ಅವರ ಪ್ರಕರಣ ಆಗಿರುವುದರಿಂದ ನಾನು ಅವರ ದೃಷ್ಟಿಯಲ್ಲಿ ಬ್ಲಾೃಕ್‌ಮೇಲರ್ ಆಗಿದ್ದೇನೆ ಎಂದು ಟೀಕಿಸಿದರು.
2001ರಲ್ಲಿಯೇ ಕೆಸರೆಯಲ್ಲಿ ಅಭಿವೃದ್ಧಿ ಮಾಡಿದ್ದ ಬಡಾವಣೆಯನ್ನು ಸಿದ್ದರಾಮಯ್ಯ ಅವರ ಬಾವಮೈದ ಮಲ್ಲಿಕಾರ್ಜುನಸ್ವಾಮಿ 2004ರಲ್ಲಿ ಕೃಷಿ ಭೂಮಿಯನ್ನಾಗಿ ಖರೀದಿ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಸಿಎಂ ಕುಟುಂಬಕ್ಕೆ ಮಂಜೂರಾಗಿರುವ 14 ಅಕ್ರಮ ಸೈಟ್‌ಗಳನ್ನು ವಾಪಸ್ ಪಡೆಯಬೇಕು. ಇದರಿಂದ ನನ್ನ ಪ್ರಕಾರವಾಗಿ ಸರ್ಕಾರಕ್ಕೆ 55 ಕೋಟಿ ರೂ. ನಷ್ಟವಾಗಿದೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅಂತಹ ಪಂಡಿತರು, ಪರಿಣಿತರು ನನ್ನ ಪ್ರಶ್ನೆಗೆ ಉತ್ತರ ಕೊಡದೆ ಮುಖ್ಯಮಂತ್ರಿಗಳು ಏನೂ ತಪ್ಪು ಮಾಡಿಲ್ಲ ಎಂದು ಭಾಷಣ ಮಾಡುತ್ತಿದ್ದಾರೆ. ಇಂತಹ ಕಾರಣಕ್ಕೆ ಪ್ರಾಸಿಕ್ಯೂಷನ್ ಕೊಡಬಾರದು ಎಂದು ಹೇಳಲಿ. ಹಾಗೆಯೇ ನಾನು ಹೇಳಿರುವುದು ತಪ್ಪು ಅಂತ ಫ್ರೂವ್ ಮಾಡಲಿ ಎಂದು ಸವಾಲು ಹಾಕಿದರು.
ಸಿಎಂ ಸೋಲು ಒಪ್ಪಿಕೊಂಡಂತಾಗಿದೆ: ಸಿದ್ದರಾಮಯ್ಯ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ನನ್ನ ವಿರುದ್ಧ ಮುಗಿಬಿದ್ದಿದ್ದಾರೆ. ಫೋನ್, ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಎಲ್ಲ ಕಡೆ ನನಗೆ ಬೈಯುತ್ತಿದ್ದಾರೆ. ಅವರ ವರ್ತನೆಯಿಂದ ನನಗೆ ಯಾವುದೇ ರೀತಿಯ ನೋವು ಆಗಿಲ್ಲ. ಬದಲಿಗೆ ನಗು ಬರುತ್ತಿದೆ. ಏಕೆಂದರೆ, ನಾನು ಪ್ರಕರಣದಲ್ಲಿ ಹೋರಾಟವನ್ನು ಈಗ ಆರಂಭಿಸಿದ್ದೇನೆ. ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಈಗಲೇ ಸೋಲು ಒಪ್ಪಿಕೊಂಡಂತಾಗಿದೆ ಎಂದು ಜರಿದರು.
‘ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಬಗ್ಗೆ ಎಲ್ಲರಿಗೂ ಗೊತ್ತಿದೆ’ ಎಂಬ ಕಾಂಗ್ರೆಸ್‌ನ ವರಿಷ್ಠ ಕೆ.ಸಿ.ವೇಣುಗೋಪಾಲ್ ಹೇಳಿಕೆ ನೀಡಿದ್ದಾರೆ. ಅವರು ಹೇಳಿದಂತೆ ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಬಗ್ಗೆ ನಮಗೂ ಗೊತ್ತಿತ್ತು. ಸದನದೊಳಗೆ ಅವರಷ್ಟು ಮಾತನಾಡುವವರು ಮತ್ತೊಬ್ಬರು ಇಲ್ಲ. ಅವರು ಹಿಂದೆಯೂ ಮುಖ್ಯಮಂತ್ರಿಯಾಗಿದ್ದರು. ಎರಡು ಬಾರಿ ಡಿಸಿಎಂ ಆಗಿದ್ದರು. ಅವರ ಐಡಿಯಾಲಜಿ ಬಗ್ಗೆ ಒಪ್ಪಿಕೊಳ್ಳುತ್ತೇನೆ. ಆದರೆ, ಇಂತಹ ಪ್ರಕರಣವನ್ನು ಯಾರು ಒಪ್ಪುತ್ತಾರೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net