ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್‌ಮೇಲರ್ : ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ

mysore
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪಡೆದಿರುವ ನಿವೇಶನ ವಿಚಾರ ಮುಂದಿಟ್ಟುಕೊಂಡು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕಡೆಯವರು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.

ಸ್ನೇಹಮಹಿಕೃಷ್ಣ ವಿರುದ್ಧ ರಾಜ್ಯಾದ್ಯಂತ ಇದುವರೆಗೆ 44 ಪ್ರಕರಣಗಳು ದಾಖಲಾಗಿದ್ದು, ಮೈಸೂರಿನಲ್ಲೇ 17 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದ್ದು, ಈಗಲೂ ಸಹ ಆತ ರೌಡ್‌ಶೀಟರ್ ಆಗಿದ್ದಾನೆ. ಕೊಲೆ ಬೆದರಿಕೆ, ಬ್ಲಾಕ್‌ಮೇಲ್ ಸೇರಿದಂತೆ ಹಲವು ಪ್ರಕರಣವನ್ನು ಆತ ಎದುರಿಸುತ್ತಿದ್ದು, ಆತನ ಹೇಳಿಕೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಡಾ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಕಡೆಯವರು ಬ್ಲಾಕ್‌ಮೇಲ್ ನಡೆಸಿರುವ ವಿಚಾರವನ್ನು ಸದ್ಯದಲ್ಲಿಯೇ ತೆರೆದಿಡಲಾಗುವುದು. ಸ್ನೇಹಮಯಿ ಕೃಷ್ಣ ಕಡೆಯವರು ಪ್ರಕರಣ ಮುಂದುವರೆಸದಿರಲು 100 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಸಿಎಂ ಪತ್ನಿ ತಪ್ಪೇ ಮಾಡದೆ ಇರುವಾಗ ಏತಕ್ಕೆ ಅವರು ಹಣ ನೀಡಬೇಕು ಎಂದು ನಾನು ಸ್ನೇಹಮಯಿ ಕೃಷ್ಣ ಕಡೆಯವರನ್ನು ಪ್ರಶ್ನೆ ಮಾಡಿದ್ದೆ ಎಂದು ಹೇಳಿದರು.

ನಾವು ಯಾವುದೇ ದೂರು ನೀಡಲು ಹೋದ ಸಂದರ್ಭದಲ್ಲಿ ಪೊಲೀಸರು ದೂರು ಸ್ವೀಕಾರ ಮಾಡುವುದಿಲ್ಲ. ಆದರೆ, ಸ್ನೇಹಮಯಿ ಕೃಷ್ಣ ದೂರು ನೀಡಿದ ತಕ್ಷಣ ಪೊಲೀಸರು ಸ್ವೀಕಾರ ಮಾಡಿದ್ದಾರೆ. ಆತ ಎಷ್ಟೊಂದು ಪ್ರಭಾವಿ ವ್ಯಕ್ತಿ ಇದ್ದಾನೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net